ಶಿರಾ: ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಈ ನಾಡು ಕಂಡ ಅಪರೂಪದ ಮುಖ್ಯಮಂತ್ರಿಗಳಾಗಿದ್ದು, ಅವರ ಅವಧಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಹಾಗೂ ರಾಜ್ಯದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಹಸಿರಾಗಿಯೇ ಇವೆ. ಇಂತಹ ಸೇವಾ ಭಾವನೆಯ ಕೇಂದ್ರ ಸಚಿವರ ವಿರುದ್ಧ ಬಾಯಿ ಚಪಲ ತೀರಿಸಿಕೊಳ್ಳಲು ಮಾತನಾಡಿರುವ ಡಿ.ಕೆ. ಸುರೇಶ್ ತಮ್ಮ ಅವಾಚ್ಯ ಹೇಳಿಕೆಯನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧದ ಅವಾಚ್ಯ ಹೇಳಿಕೆಗೆ ಡಿ.ಕೆ. ಸುರೇಶ್ ಕ್ಷಮೆ ಯಾಚಿಸಲೆಂದು ಶಿರಾ ತಾಲೂಕು ಜೆಡಿಎಸ್ ಮುಖಂಡರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯ ಜೆಡಿಎಸ್ ಕಾರ್ಯಕಾರಿ ಸಮಿತಿ ಸದಸ್ಯ ಆರ್. ಉಗ್ರೇಶ್ ಮಾತನಾಡಿ, ಅಣ್ಣ ತಮ್ಮ ನೀವಿಬ್ಬರೂ ಸೇರಿಕೊಂಡು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಡಳಿತ ನಡೆಸಲು ಬಿಡುತ್ತಿಲ್ಲ. ಇನ್ನು ನಿಮ್ಮ ಪಕ್ಷದಲ್ಲಿರುವವರನ್ನು ನೀವು ಬಿಡುವವರೇ ಅಲ್ಲ. ಮುಂದೆ ಇಂತಹ ಹೇಳಿಕೆ ನೀಡಿದಲ್ಲಿ ಶಿರಾದಿಂದ ರಾಜಧಾನಿಯವರೆಗೂ ಪಾದಯಾತ್ರೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ, ಕುಮಾರಣ್ಣ ಅವರ ವ್ಯಕ್ತಿತ್ವ ಹಾಗೂ ಡಿ.ಕೆ.ಸುರೇಶ್ ಅವರ ವ್ಯಕ್ತಿತ್ವವನ್ನು ಈ ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಡಿ.ಕೆ. ಸುರೇಶ್ ಅವರು ವ್ಯಕ್ತಿಯ ವ್ಯಕ್ತಿತ್ವ ಅಳೆದು ನೋಡಿ ಮಾತನಾಡುವುದನ್ನು ಕಲಿಯಬೇಕು. ಕುಮಾರಣ್ಣ ಅವರ ವಿರುದ್ಧ ಸುರೇಶ್ ಅವರು ಮಾತನಾಡಿರುವ ಹೇಳಿಕೆಯನ್ನು ಖಂಡಿಸಿ ರಾಜ್ಯ ಜೆಡಿಎಸ್ ಪ್ರತಿಭಟನೆಗೆ ಸಿದ್ಧಗೊಳ್ಳುವ ಮುನ್ನ ಅವರು ಕ್ಷಮೆ ಯಾಚಿಸಬೇಕು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎಸ್. ಸತ್ಯಪ್ರಕಾಶ್ ಮಾತನಾಡಿ, ಕುಮಾರಣ್ಣ ಜನ ಸಾಮಾನ್ಯರ ಮುಖ್ಯಮಂತ್ರಿಯಾಗಿದ್ದರು. ರಾಜ್ಯದ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಅವರದ್ದು. ಯುವಕರಿಗೆ ಮಾದರಿಯಾಗಿರಬೇಕಾದ ಸುರೇಶ್ ಅವರಿಗೆ ಬಾಯಿ ಚಪಲವಿದೆಯೇ ಹೊರತು ಕುಮಾರಣ್ಣ ಅವರಿಗೇ ಅಲ್ಲ. ಅವರು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ಒತ್ತಾಯ ಮಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ನಗರಸಭಾ ಸದಸ್ಯರಾದ ಆರ್. ರಾಮು, ಅಂಜಿನಪ್ಪ, ಮುಖಂಡರಾದ ಆರ್. ರಾಘವೇಂದ್ರ, ಟಿ.ಡಿ.ಮಲ್ಲೇಶ್, ಬರಗೂರು ಚೋಪಣ್ಣ, ಪುನೀತ್, ರೆಹಮತ್, ಸಾಧಿಕ್, ಸುನಿಲ್‌ಕುಮಾರ್, ಶ್ರೀ ರಂಗ, ತಿಮ್ಮರಾಜು ಸೇರಿದಂತೆ ಹಲವರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


