ಗುಬ್ಬಿ: ಎಂಟು ಜಿಲ್ಲೆಯ ರೈತರ ಕೆರೆಗಳಿಗೆ ನೀರು ತುಂಬಿಸಿ ರೈತರ ಜೀವಜಲವಾಗಲು ಹೊರಟಿರುವ ಎತ್ತಿನಹೊಳೆ ಯೋಜನೆ ಮುಗಿಯುವ ಹಂತದಲ್ಲಿರುವಾಗ ಅಸೂಯೆಯಿಂದ ಕೇಂದ್ರ ಸರ್ಕಾರ ಇಲ್ಲಸಲ್ಲದ ಕ್ಯಾತೆ ತೆಗೆದು ಯೋಜನೆ ಪೂರ್ಣಗೊಳಿಸಲು ಅಡ್ಡಿಪಡಿಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಕಿಡಿಕಾರಿದರು. ಅವರು ಪ್ರವಾಸಿ ಮಂದಿರದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದ ದೊಡ್ಡ ನೀರಾವರಿ ಯೋಜನೆ ಎನಿಸಿದ್ದ ಎತ್ತಿನಹೊಳೆ ಯೋಜನೆ ಹಾಸನ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಯ 76 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ತರ ಕಾರ್ಯ ನಡೆದಿದೆ. 29 ತಾಲ್ಲೂಕಿನ 6657 ಗ್ರಾಮಗಳಿಗೆ, 527 ಕೆರೆಗಳಿಗೆ ಒಟ್ಟು 14 ಟಿಎಂಸಿ ನೀರು ಹರಿಯಲಿದೆ. ಈ ಯೋಜನೆಯಿಂದ ಎಂಟು ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಒಟ್ಟು 252.69 ಕಿಮೀ ಉದ್ದದ ಕಾಲುವೆಯಲ್ಲಿ 208 ಕಿಮೀ ಕಾಮಗಾರಿ ಪೂರ್ಣವಾಗಿದೆ ಎಂದರು.
ಕೇಂದ್ರ ಸರ್ಕಾರ ಈ ಮಟ್ಟದ ಕಾಮಗಾರಿ ಆಗುವವರೆಗೆ ಸುಮ್ಮನಿದ್ದು ಈಗ ನಾಲ್ಕು ತಿಂಗಳಿಂದ ಏಕಾಏಕಿ ಮೂರು ಸಮಿತಿ ರಚಿಸಿ ಪರಿಸರ ಹೆಸರಿನಿಂದ ಅಡ್ಡಿಗಾಲು ಹಾಕಿದೆ. ಈ ಯೋಜನೆ ಬಗ್ಗೆ ಮನವರಿಕೆ ಮಾಡಲು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ದೆಹಲಿ ಹಾಗೂ ಡೆಹ್ರಾಡೂನ್ ತೆರಳಿ 111 ಹೆಕ್ಟೇರ್ ಅರಣ್ಯ ಪ್ರದೇಶದ ಅರಣ್ಯಿಕರಣ ಬಗ್ಗೆ ಸವಿವರವಾಗಿ ಚರ್ಚಿಸಿದ್ದರೂ ಅನುಮತಿ ನೀಡುತ್ತಿಲ್ಲ. ದುರುದ್ದೇಶ ಎದ್ದು ಕಾಣುವ ಹಿನ್ನೆಲೆ ರೈತರಿಗೆ ಅವಶ್ಯ ಎತ್ತಿನಹೊಳೆ ಯೋಜನೆ ಉಳಿಸಲು ಜನವರಿ 4 ರಂದು ಕೆ.ಬಿ.ಕ್ರಾಸ್ ಬಳಿ ಜನಧ್ವನಿ ಕಾರ್ಯಕ್ರಮದ ಮೂಲಕ ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲ್ಲೂಕಿನ ಜನರಿಗೆ ಅರಿವು ಮೂಡಿಸಿ ಕೇಂದ್ರ ಸರ್ಕಾರದ ಜನವಿರೋಧಿತನ ಬಯಲಿಗೆ ಎಳೆಯಲಾಗುವುದು ಎಂದರು.
ಕೆಪಿಸಿಸಿ ಮಾಜಿ ಸದಸ್ಯ ಕೆ.ಆರ್.ತಾತಯ್ಯ ಮಾತನಾಡಿ, ಬೃಹತ್ ಯೋಜನೆಗೆ ಭೂ ಸ್ವಾಧೀನ ವಿಚಾರದಲ್ಲಿ ಅಡೆತಡೆ ಎದುರಾದಾಗ ಡಿ.ಕೆ.ಶಿವಕುಮಾರ್ ಅವರು ಮುನ್ನು ನಿಂತು ಎಲ್ಲಾ ಸಮಸ್ಯೆ ಬಗೆಹರಿಸಿ ಹತ್ತು ವರ್ಷದಲ್ಲಿ ಅಂತಿಮ ರೂಪಕ್ಕೆ ತಂದಿದ್ದಾರೆ. ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಕೇಂದ್ರ ಕುತಂತ್ರದ ಬಗ್ಗೆ ತುಮಕೂರು ಜಿಲ್ಲೆಯ ಫಲಾನುಭವಿ ತಾಲ್ಲೂಕಿನ ಜನರಿಗೆ ಅರಿವು ಮೂಡಿಸಲು ಜನಧ್ವನಿ ಕಾರ್ಯಕ್ರಮ ಕೆ.ಬಿ.ಕ್ರಾಸ್ ಬಳಿ ಆಯೋಜಿಸಲಾಗಿದೆ ಎಂದರು.
ಗುಬ್ಬಿ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್ ಮಾತನಾಡಿ, ಎತ್ತಿನಹೊಳೆ ಯೋಜನೆ ಮುಗಿಯುವ ಹಂತದಲ್ಲಿ ಐಎ ಇಲಾಖೆಗಳನ್ನು ಧೂ ಬಿಟ್ಟು ತಕರಾರು ಸೃಷ್ಟಿಸಿದ ಕೇಂದ್ರ ಸರ್ಕಾರದ ದುರುದ್ದೇಶ ಬಗ್ಗೆ ಜನರಿಗೆ ತಿಳಿಸಬೇಕಿದೆ. ಈ ಬಗ್ಗೆ ಜಿಲ್ಲೆಯ ರೈತರಿಗೆ, ಮಹಿಳೆಯರಿಗೆ, ಯುವ ಜನಾಂಗಕ್ಕೆ ತಿಳಿಸಿ ಎತ್ತಿನಹೊಳೆ ಯೋಜನೆ ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ಭಾನುವಾರ ತಾಲ್ಲೂಕಿನ ರೈತ ಬಾಂಧವರು ಕೆ.ಬಿ.ಕ್ರಾಸ್ ಹೋರಾಟಕ್ಕೆ ಭಾಗಿಯಾಗುವಂತೆ ಕರೆ ನೀಡಿದರು.
ಜಿಪಂ ಮಾಜಿ ಸದಸ್ಯ ಜಿ. ಎಚ್.ಜಗನ್ನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಯತೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯಮ್ಮ, ಮುಖಂಡರಾದ ಗುರು ರೇಣುಕಾರಾಧ್ಯ, ಎ.ನರಸಿಂಹಮೂರ್ತಿ, ವಾಸುಗೌಡ, ಈಶ್ವರಯ್ಯ, ಕಿಟ್ಟದಕುಪ್ಪೆ ನಾಗರಾಜ್, ತಿಮ್ಮಪ್ಪಾಳ್ಳ ಶಶಿ ಇನ್ನಿತರರು ಇದ್ದರು.
“2014 ರಲ್ಲಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಿದ್ದ ಎತ್ತಿನಹೊಳೆ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ 23 ಸಾವಿರ ಕೋಟಿ ರೂ. ವಿನಿಯೋಗಿಸಿ, ಶೇಕಡಾ 90 ರಷ್ಟು ಕೆಲಸ ಪೂರ್ಣವಾಗಿದೆ. ಈ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ಹೆಸರು ಬರುತ್ತದೆ ಎಂಬ ಅಸೂಯೆಯಲ್ಲಿ ಅರಣ್ಯ, ಪರಿಸರ ಹೆಸರಿನಿಂದ ಕೇಂದ್ರ ಸರ್ಕಾರ ಯೋಜನೆಗೆ ಅಡ್ಡಿಗಾಲು ಹಾಕುತ್ತಿದೆ.”
– ಮುರಳೀಧರ ಹಾಲಪ್ಪ ಉಪಾಧ್ಯಕ್ಷರು, ಕೆಪಿಸಿಸಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


