ವಾರಣಾಸಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ಕಾರ್ಯ ಮೂರನೇ ದಿನವಾದ ಇಂದು ಮುಂದುವರೆದಿದ್ದು, ಇಂದು ಸರ್ವೇಯಲ್ಲಿ ಹಲವು ಮಹತ್ವದ ಅಂಶಗಳು ಪತ್ತೆಯಾಗಿವೆ ಎಂದು ವಕೀಲರಾದ ವಿಷ್ಣುಜೈನ್ ತಿಳಿಸಿದ್ದಾರೆ. ನಿನ್ನೆವರೆಗೂ ನಡೆದ ಸರ್ವೇಯಲ್ಲಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ.
ವಕೀಲರಾದ ಹರೀಶಂಕರ್ ಜೈನ್, ವಿಷ್ಣು ಜೈನ್ ಅವರ ಪ್ರಕಾರ ಭಾನುವಾರ ಮಸೀದಿಯ ಪ್ರದೇಶದ ಸಮೀಕ್ಷೆ ವೇಳೆ ಕೆಲವು ಭಾಗಗಳು ದೇವಸ್ಥಾನವಾಗಿ ಬಳಕೆಯಾಗಿರುವುದು ಕಂಡು ಬಂದಿದೆ. ಮಸೀದಿ ಸಂಕೀರ್ಣದ ಪಶ್ಚಿಮ ಭಾಗದ ಗೋಡೆ ಮೇಲೆ ಹಿಂದು ದೇವರುಗಳ ಕುರುಹುಗಳು ಪತ್ತೆಯಾಗಿವೆ. ಇದು ದೊಡ್ಡ ಪುರಾವೆಯಾಗಿದೆ. ಶನಿವಾರದ ಸರ್ವೇಯಲ್ಲಿ ಮೂರು ಕೊಠಡಿಗಳನ್ನು ತೆರೆಯಲಾಗಿದೆ, ಇಂದು ನಾಲ್ಕನೇ ಕೊಠಡಿಯನ್ನು ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಸೀದಿಯು ವಾರಣಾಸಿ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿದೆ. ಸ್ಥಳೀಯ ನ್ಯಾಯಾಲಯವು ಅದರ ಹೊರಗಿನ ಗೋಡೆಗಳ ಮೇಲೆ ಪ್ರತಿನಿತ್ಯದ ಪ್ರಾರ್ಥನೆಗೆ ಅನುಮತಿ ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಸೇರಿ ಐದು ಮಂದಿ ಮಹಿಳೆಯರು 2021ರ ಏಪ್ರಿಲ್ 18 ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ಗುರುವಾರ ಸಮೀಕ್ಷೆಗೆ ಆದೇಶಿಸಿದೆ.
ಕಳೆದ ವಾರ ಮಸೀದಿ ಸಮಿತಿಯ ಆಕ್ಷೇಪದ ನಡುವೆ ಸಮೀಕ್ಷೆಯನ್ನು ಸ್ಥಗಿತಗೊಳಿಸಲಾಯಿತು, ಸಮೀಕ್ಷೆಗಾಗಿ ನ್ಯಾಯಾಲಯವು ನೇಮಿಸಿದ ವಕೀಲ ಕಮಿಷನರ್ ಆವರಣದೊಳಗೆ ಚಿತ್ರೀಕರಣ ನಡೆಸಲು ಅವಕಾಶ ಇಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರಿಂದ ಒಂದಷ್ಟು ಕಾಲ ಸರ್ವೇ ಸ್ಥಗಿತಗೊಂಡಿತ್ತು. ಸಮೀಕ್ಷೆ ಕಾರ್ಯಕ್ಕಾಗಿ ನಿಯೋಜಿತರಾದ ಕೋರ್ಟ್ ಕಮಿಷನರ್ ಅಜಯ್ ಮಿಶ್ರಾ ಮತ್ತು ಸದಸ್ಯರಿಗೆ ಭಾರೀ ಭದ್ರತೆ ಆಯೋಜಿಸಲಾಗಿದೆ. ನ್ಯಾಯಾಯಲಯ ಸೂಚನೆ ಮೇರೆಗೆ ಮಂಗಳವಾರ ವರದಿ ಸಲ್ಲಿಸಬೇಕಿದೆ. ಆದ್ದರಿಂದ ಬಹುತೇಕ ಇಂದು ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB