ಬಿಜಾಪುರ್: ಗುತ್ತಿಗೆದಾರನೊಬ್ಬನ ಭ್ರಷ್ಟಾಚಾರ ಬಯಲಿಗೆಳೆದಿದ್ದ ಪತ್ರಕರ್ತನ ಶವ, ಅದೇ ಗುತ್ತಿಗೆದಾರನಿಗೆ ಸೇರಿದ ಸ್ಥಳದ ಸೆಪ್ಟಿಕ್ ಟ್ಯಾಂಕ್ನಲ್ಲಿ ಪತ್ತೆಯಾಗಿರುವ ಘಟನೆ ಛತ್ತೀಸ್ಗಡದಲ್ಲಿ ನಡೆದಿದೆ.
ಹವ್ಯಾಸಿ ಪತ್ರಕರ್ತ ಮುಕೇಶ್ ಚಂದ್ರಕಾರ್(28) ಹತ್ಯೆಗೀಡಾಗಿರುವ ಪತ್ರಕರ್ತನಾಗಿದ್ದಾನೆ. ಇವರ ಮೃತದೇಹ ಶುಕ್ರವಾರ ಸಂಜೆ ಬಿಜಾಪುರ್ ಜಿಲ್ಲೆಯ ಚಟ್ಟನಪರ ಬಸ್ತಿ ಎಂಬಲ್ಲಿ ಪತ್ತೆಯಾಗಿದೆ.
ಗುತ್ತಿಗೆದಾರ ಸುರೇಶ್ ಚಂದ್ರಕಾರ್ ಎಂಬಾತನ ಅಕ್ರಮಗಳ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದ್ದ ಮುಕೇಶ್, ಬಸ್ತಾರ್ ನಲ್ಲಿನ 120 ಕೋಟಿ ರೂ ಮೊತ್ತದ ರಸ್ತೆ ನಿರ್ಮಾಣ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದನ್ನು ಬಯಲಿಗೆಳೆದಿದ್ದರು.
ಈ ವರದಿ ಹಿನ್ನೆಲೆ ಗುತ್ತಿಗೆದಾರನ ವಿರುದ್ಧ ತನಿಖೆಗೆ ಸರ್ಕಾರದ ಮೇಲೆ ಒತ್ತಡ ಬಂದಿತ್ತು. ಇದರ ಬೆನ್ನಲ್ಲೇ ಜನವರಿ 1ರಂದು ಪತ್ರಕರ್ತ ಮುಖೇಶ್ ನಾಪತ್ತೆಯಾಗಿದ್ದರು. ಹೀಗಾಗಿ ಮುಕೇಶ್ ಅವರ ಅಣ್ಣ ಯುಕೇಶ್ ಚಂದ್ರಕಾರ್ ಅವರು ಪೊಲೀಸರಿಗೆ ಕಾಣೆ ದೂರು ಸಲ್ಲಿಸಿದ್ದರು.
ಮಾತುಕತೆಗಾಗಿ ಚಟ್ಟನಪರದಲ್ಲಿನ ಸುರೇಶ್ನ ಸ್ಥಳಕ್ಕೆ ತೆರಳಿದ್ದ ಮುಕೇಶ್, ಅದೇ ಜಾಗದಲ್ಲಿನ ನೀರಿನ ಟ್ಯಾಂಕ್ ನಲ್ಲಿ ಜನವರಿ 3ರಂದು ಶವವಾಗಿ ಪತ್ತೆಯಾಗಿದ್ದಾರೆ.
ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಹೈದರಾಬಾದ್ನಲ್ಲಿ ಸುರೇಶ್ ಚಂದ್ರಕಾರ್ನನ್ನು ಹಾಗೂ ದಿಲ್ಲಿಯಲ್ಲಿ ರಿತೇಶ್ನನ್ನು ಬಂಧಿಸಿದ್ದಾರೆ. ಶವವನ್ನು ಎಸೆಯಲು ಸಹಾಯ ಮಾಡಿದ ಕಾರ್ಮಿಕನೊಬ್ಬನನ್ನು ಕೂಡ ಬಂಧಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx