ತುಮಕೂರು ವಿಧಾನಸಭಾ ಕ್ಷೇತ್ರ: ಕರ್ನಾಟಕ ರಾಷ್ಟ್ರ ಸಮಿತಿ(KRS) ಪಕ್ಷದ ವತಿಯಿಂದ ಏಳಿ! ಎದ್ದೇಳಿ! ವೀರಕನ್ನಡಿಗರೇ, ಭ್ರಷ್ಟರನ್ನು ತೊಲಗಿಸುವ ತನಕ ವಿರಮಿಸದಿರಿ ಅನ್ನೋ ಘೋಷಣೆಯೊಂದಿಗೆ ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಕರುನಾಡು ಕಟ್ಟೋಣ — ಸಂಕಲ್ಪ ಯಾತ್ರೆ ಯಶಸ್ವಿಯಾಗಿ ನಡೆದಿದ್ದು, ಇದೀಗ ಯಾತ್ರೆಯ ಸಮಾರೋಪ ಸಮಾರಂಭ ನಡೆದಿದೆ.
ಯಾತ್ರೆಯು ರಾಮನಗರ ಜಿಲ್ಲೆಯ ಮಾಗಡಿಯಿಂದ ಪ್ರಾರಂಭವಾಗಿ ತುಮಕೂರು, ಹಾಸನ, ಚಿಕ್ಕಮಗಳೂರು,ದಾವಣಗೆರೆ, ಹಾವೇರಿ ಮಾರ್ಗವಾಗಿ , ಧಾರವಾಡ, ಬೆಳಗಾವಿ ಮತ್ತು ಬಾಗಲಕೋಟೆ , ಕೊಪ್ಪಳ, ವಿಜಯನಗರ, ಬಳ್ಳಾರಿ, ಇಂದು ಚಿತ್ರದುರ್ಗ ತಲುಪಿ ಮುಂದೆ ಸಾಗಿ ಸಿರಾ ಮತ್ತು ತುಮಕೂರಿನಲ್ಲಿ ಸಮಾರೋಪಗೊಂಡಿದೆ.
ಪ್ರಸ್ತುತ ಯಾತ್ರೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಕೆ.ಆರ್.ಎಸ್. ಪಕ್ಷದ ಪ್ರಮುಖ ಪ್ರಣಾಳಿಕೆ ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಮತ್ತು ಅದನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯ ಸಮಾರೋಪದಲ್ಲಿ ಪಕ್ಷದ ಸಂಪೂರ್ಣ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು. ಈಗಾಗಲೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು 82 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಜನರ ಬಳಿಗೆ ತೆರಳಿ ತನ್ನ ಹಾಗೂ ಜೆಸಿಬಿ ಪಕ್ಷಗಳ ರಾಜಕೀಯ ವಿಚಾರಗಳನ್ನ ಕ್ಷೇತ್ರದ ಮತದಾರರಿಗೆ ಬಿಡಿಬಿಡಿಯಾಗಿ ವಿವರಿಸುತ್ತಿದ್ದಾರೆ.
ಈಗಾಗಲೇ ಜೆಸಿಬಿ ಪಕ್ಷಗಳು ಮಾಡುತ್ತಿರುವ ಅನಾಚಾರದ ಕುಕ್ಕರ್, ಲಿಕ್ಕರ್, ಹಣ, ಹೆಂಡದ ವಿಚಾರಗಳನ್ನು ತೊಲಗಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಕೆಲಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಪಕ್ಷದ ಸಂಘಟನೆಯಲ್ಲಿ ಮತ್ತು ಕ್ಷೇತ್ರದಲ್ಲಿ ಉತ್ತಮವಾಗಿ ಪ್ರಚಾರ ನಡೆಸಿರುವವರನ್ನು ಅಭ್ಯರ್ಥಿಗಳೆಂದು ಘೋಷಣೆ ಮಾಡಲಾಗುವುದು ಎಂದು ಪಕ್ಷ ತಿಳಿಸಿದೆ.
ಜೆಸಿಬಿ ಪಕ್ಷಗಳು ಸಂಪೂರ್ಣವಾಗಿ ಸಮಾಜವನ್ನು ಒಡೆದು, ರಾಜ್ಯವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿವೆ ಮತ್ತು ಅವರು ಪ್ರತಿನಿತ್ಯವೂ ಹಣ, ಹೆಂಡ, ಸೀರೆ ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಈ ಪಕ್ಷಗಳಿಗೆ ರಾಜ್ಯವನ್ನು ಸಮಗ್ರವಾಗಿ ಕಟ್ಟುವ, ಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುನ್ನೆಡೆಸುವ ಯೋಜನೆಯಾಗಲಿ ಅಥವಾ ಬದ್ಧತೆಯಾಗಲಿ ಇಲ್ಲವೇ ಇಲ್ಲ. ಅವರ ಎಲ್ಲಾ ಯೋಜನೆಗಳು ಕೇವಲ ಹಣ ಮಾಡಲು ಮತ್ತು ಚುನಾವಣೆಯಲ್ಲಿ ಗೆಲ್ಲಲು ಮಾತ್ರ. ರಾಜ್ಯದ ಜನ ಜೆಸಿಬಿ ಪಕ್ಷಗಳ ಒಪ್ಪಂದ ರಾಜಕಾರಣ ವ್ಯವಸ್ಥೆಯನ್ನ ತಿರಸ್ಕರಿಸಿ ಉತ್ತಮ ರಾಜಕಾರಣವನ್ನು ನಾಡಿಗೆ ತರುವ ನಿಟ್ಟಿನಲ್ಲಿ ಹೋರಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನ ಬೆಂಬಲಿಸುತ್ತಾರೆ ಹಾಗೂ 2023ರ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನಸೌಧದ ಶಕ್ತಿ ಕೇಂದ್ರಕ್ಕೆ ಕಳಿಸಕೊಡಲಿದ್ದಾರೆ ಎಂಬ ನಂಬಿಕೆಯಿಂದ ರಾಜ್ಯದಲ್ಲಿ ಯಾತ್ರೆಯು ನಡೆಯುತ್ತಿದೆ ಎಂದಿದೆ.
ಕಟಕೋಳದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿಯವರು ಪಕ್ಷದ ಪ್ರಣಾಳಿಕೆಯನ್ನು ಘೋಷಿಸಿದರು, ಪ್ರಣಾಳಿಕೆ ಈ ಕೆಳಗಿನಂತಿದೆ:
ರಾಜ್ಯ ಸರ್ಕಾರದಲ್ಲಿ ಈಗ ಖಾಲಿ ಇರುವ ಎಲ್ಲಾ 3 ಲಕ್ಷ ಹುದ್ದೆಗಳಿಗೆ ಒಂದೇ ವರ್ಷದಲ್ಲಿ ಪಾರದರ್ಶಕವಾಗಿ ನೇಮಕಾತಿ ಮಾಡಲಾಗುವುದು. ಆ ಮೂಲಕ ರಾಜ್ಯದಲ್ಲಿ ನಿರುದ್ಯೋಗ ಹತೋಟಿಗೆ ಕ್ರಮ ಕೈಗೊಳ್ಳಲಾಗುವುದು ಮತ್ತು ಆಡಳಿತಕ್ಕೆ ಚುರುಕು ಮತ್ತು ದಕ್ಷತೆ ತರಲಾಗುವುದು.
ಆಡಳಿತದ ಎಲ್ಲಾ ಹಂತಹಗಳಲ್ಲಿ ಭ್ರಷ್ಟಾಚಾರ ಕೊನೆಗೊಳಿಸಲು ಲೋಕಾಯುಕ್ತವನ್ನು ಬಲಗೊಳಿಸಲಾಗುವುದು. ಭ್ರಷ್ಟರನ್ನು ಮುಲಾಜಿಲ್ಲದೆ ಕೆಲಸದಿಂದ ವಜಾ ಮಾಡುತ್ತೇವೆ ಮತ್ತು ಜೈಲಿಗಟ್ಟುತ್ತೇವೆ.
ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪ್ರತಿ ಸರ್ಕಾರಿ ಕಚೇರಿಯಲ್ಲಿ ಹಾಜರಿರುವ ಅಧಿಕಾರಿಗಳ, ನೌಕರರ ಲೈವ್ ಮಾಹಿತಿಯನ್ನು ಆಯಾ ಕಚೇರಿಯ ಮುಂಭಾಗ ಮಾಹಿತಿ ಸ್ಕ್ರೀನ್ನಲ್ಲಿ ಮತ್ತು ಆನ್ಲೈನ್ನಲ್ಲಿ (ಸ್ಕ್ರೀನ್ ಗಳಲ್ಲಿ) ಸಿಗುವ ಹಾಗೆ ಮಾಡಲಾಗುವುದು.
ಪ್ರತಿದಿನದ ವ್ಯವಹಾರ, ಆದೇಶಗಳು, ಹಣ ಮಂಜೂರಾತಿ, ಹಣ ಬಿಡುಗಡೆ, ಕಾಮಗಾರಿಯ ಹಂತದ ಫೋಟೋ -ವಿಡಿಯೋಗಳನ್ನು ಅಂದೇ ಸಾರ್ವಜನಿಕರು ಸುಲಭವಾಗಿ ಪರಿಶೀಲಿಸಬಹುದಾದ ರೀತಿಯಲ್ಲಿ ಆನ್ಲೈನ್ ಗೆ ಅಪ್ಲೋಡ್ ಮಾಡಲಾಗುವುದು. ಆ ಮೂಲಕ ಮಾಹಿತಿ ಪಡೆಯಲು ಶುಲ್ಕ, ಅಧಿಕಾರಿಗಳ ಸಮಯ ವ್ಯಯ, ಜನರ ಅನಗತ್ಯ ಅಲೆದಾಟಗಳಿಗೆ ಬ್ರೇಕ್ ಹಾಕಲಾಗುವುದು.
ರಾಜ್ಯದಲ್ಲಿ ಬಡತನ ನಿರ್ಮೂಲನೆಗೆ ದೊಡ್ಡ ಕಂಟಕಪ್ರಾಯವಾಗಿರುವುದು ಬಡಜನರ, ಅದರಲ್ಲಿಯೂ ಗ್ರಾಮೀಣ ಭಾಗದ ಜನರ ಮದ್ಯಪಾನ ಚಟ. ಹಾಗಾಗಿ ಬಡತನ ನಿವಾರಣೆಗಾಗಿ ರಾಜ್ಯದಲ್ಲಿ ಸಂಪೂರ್ಣ ಮದ್ಯನಿಷೇಧ ಜಾರಿ ಮಾಡಲಾಗುವುದು.
ಕೃಷಿಗೆ ಮತ್ತು ರೈತರಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಬೆಳೆ ಮತ್ತು ಬೆಲೆ ಪದ್ಧತಿ ಜಾರಿ ಮಾಡಲಾಗುವುದು. ಕೃಷಿ ಬೆಳೆಗಳಿಗೆ ಮೂಲದಲ್ಲಿಯೇ, ಅಂದರೆ ಸ್ಥಳೀಯ ಪ್ರದೇಶದಲ್ಲಿಯೇ ಮೌಲ್ಯವರ್ಧನೆ ಮಾಡಿ ಕೃಷಿ ಉತ್ಪನ್ನಗಳಾಗಿ ಪರಿವರ್ತಿಸಲು ಯೋಜನೆಗಳನ್ನು ರೂಪಿಸಲಾಗುವುದು.
ಅದರ ಭಾಗವಾಗಿ ತರಕಾರಿ, ಹಣ್ಣು ಸಂರಕ್ಷಣೆಗಾಗಿ ಹೋಬಳಿಗೆ ಒಂದು ಶೈತ್ಯಾಗಾರ ನಿರ್ಮಿಸಲಾಗುವುದು.
ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ನೂಲು ತಯಾರಿಕೆ, ಬಟ್ಟೆ ತಯಾರಿಕಾ ಘಟಕ ನಿರ್ಮಾಣ ಮತ್ತು ಮಾರಾಟ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು
ಪ್ರತಿ ತಾಲೂಕಿನಲ್ಲಿ ಒಂದು ಹೈಟೆಕ್ ಡೈರಿ ನಿರ್ಮಿಸಿ, ಸ್ಥಳೀಯವಾಗಿ ಉತ್ಪತ್ತಿಯಾಗುವ ಹಾಲನ್ನು ಅಲ್ಲಿಯೇ ಬೆಣ್ಣೆ, ಮೊಸರು, ತುಪ್ಪ, ಕೋವ, ಚೀಸ್, ಪನೀರ್ ಮುಂತಾದ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ನಿರ್ಮಿಸಲಾಗುವುದು. ಆ ಮೂಲಕ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಮತ್ತು ಸಂಪತ್ತು ಹೆಚ್ಚಿಸಲಾಗುವುದು.
ಕೃಷಿ ಮಾರುಕಟ್ಟೆಯ ವ್ಯವಹಾರಗಳ ಲೈವ್ ಮಾಡಲಾಗುವುದು. ಆ ಮೂಲಕ ರೈತರಿಗೆ ಆಗುತ್ತಿರುವ ವಂಚನೆ ಮತ್ತು ಮೋಸ ತಡೆಗಟ್ಟಲಾಗುವುದು.
ನದಿ ನೀರಿನ ಮೂಲಕ ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ರೈತರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು.
ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾವಣೆ ಮಾಡಿ ಗ್ರಾಮಸ್ವರಾಜ್ಯ ನಿರ್ಮಾಣ ಮಾಡಲು ಬೇಕಾದ ಬಲವನ್ನು ಅವುಗಳಿಗೆ ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ಆರ್ಥಿಕತೆ ನಿರ್ಮಾಣ ಮತ್ತು ಸ್ವಾವಲಂಬನೆಗೆ ಆದ್ಯತೆ ನೀಡಲಾಗುವುದು.
ಗೋಮಾಳ ಮತ್ತು ಕೆರೆಕಟ್ಟೆಗಳೂ ಸೇರಿದಂತೆ ಸರ್ಕಾರಿ ಭೂಮಿಯಲ್ಲಿ ಹಾಗೂ ಖಾಸಗಿಯವರ ನೀರಾವರಿರಹಿತ ಬಂಜರು ಭೂಮಿಯಲ್ಲಿ ಸೌರವಿದ್ಯುತ್ ತಯಾರಿಕೆಗೆ ಆದ್ಯತೆ ನೀಡಲಾಗುವುದು. ರಾಜ್ಯದ ಪ್ರತಿ ಕೆರೆಯಲ್ಲಿಯೂ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗುವುದು. ಆ ಮೂಲಕ ಗ್ರಾಮೀಣ ಭಾಗದಲ್ಲಿಯೆ ಉದ್ಯೋಗಸೃಷ್ಟಿ ಮತ್ತು ಪರಿಸರಸ್ನೇಹಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು.
ರಾಜ್ಯದ ಪ್ರತಿ ಹಳ್ಳಿಗೂ ನದಿ ಮೂಲದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಗ್ರಾಮ ಪಂಚಾಯತಿಗೊಂದು ಸುಸಜ್ಜಿತ ಕ್ರೀಡಾಂಗಣ, ಸಂಜೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬೇಕಾದ ಸಮುದಾಯ ಭವನ ಸೇರಿದಂತೆ ಎಲ್ಲಾ ಆಧುನಿಕ ವ್ಯವಸ್ಥೆ ನಿರ್ಮಿಸಲಾಗುವುದು.
ಖಾಲಿ ಇರುವ ಸರ್ಕಾರಿ ಭೂಮಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಟಿಂಬರ್ ಮತ್ತು ಹಣ್ಣುಹಂಪಲುಗಳ ಗಿಡಮರ ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಆ ಯೋಜನೆಯಲ್ಲಿ ಪಾಲ್ಗೊಳ್ಳುವ ಯುವಜನರಿಗೆ ಪ್ರತಿತಿಂಗಳೂ ಪ್ರೋತ್ಸಾಹಧನ ನೀಡಲಾಗುವುದು.
ಸರ್ಕಾರಿ ವ್ಯವಸ್ಥೆಯ ಉದ್ದೇಶಪೂರ್ವಕ ನಿರ್ಲಕ್ಷ್ಯ ಹಾಗೂ ಖಾಸಗಿ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡುವ ಕುತಂತ್ರಗಳಿಂದಾಗಿ ಮುಚ್ಚಲ್ಪಟ್ಟಿರುವ MPM, VISL, MySugar ನಂತಹ ಸಹಕಾರಿ, ರಾಜ್ಯ ಸರ್ಕಾರಿ, ಕೇಂದ್ರ ಸರ್ಕಾರಿ ಒಡೆತನದ ಉದ್ದಿಮೆಗಳನ್ನು ಗುರುತಿಸಿ ರಾಜ್ಯ ಸರ್ಕಾರದ ಅಡಿಯಲ್ಲಿ ಅವುಗಳನ್ನು ಆಧುನೀಕರಣ ಮಾಡಿ ಪುನರಾರಂಭ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.
ಈ ವೇಳೆ ರಾಜ್ಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ರಾಜ್ಯ ಯುವ ಘಟಕ ಅಧ್ಯಕ್ಷ ರಘು ಜಾಣಗೆರೆ, ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಮತ್ತಿತರರು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy