ಸರಗೂರು: ತಾಲೂಕಿನ ಸಾಗರೆ ಗ್ರಾಮದ ಬಳಿ ಕಬಿನಿ ಬಲದಂಡೆ ಕಾಲುವೆಗೆ ಕಾರು ಬಿದ್ದಿರುವ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಕಬಿನಿ ಬಲದಂಡ ನಾಲೆಗೆ ಬಿದ್ದು ಇಬ್ಬರು ವಕೀಲರು ನೀರು ಪಾಲಾಗಿದ್ದು, ಒಬ್ಬ ವಕೀಲ ದಡ ಸೇರಿರುವ ಘಟನೆ ಶುಕ್ರವಾರ ನಡೆದಿದೆ.
ಹುಣಸೂರು ತಾಲ್ಲೂಕಿನ ನಿಲುವಾಗಿಲು ಗ್ರಾಮದ ಲೇ.ಸ್ವಾಮಿ ನಾಯಕ ಅವರ ಮಗ ಗಿರೀಶ್ (40), ಹುಂಡುವಾಡಿ ಗ್ರಾಮದ ಬುಂಡಯ್ಯ ಅವರ ಮಗ ಸಿ. ದಿನೇಶ್ (50) ನದಿಯಲ್ಲಿ ಕೊಚ್ಚಿ ಹೋದವರು. ಮತ್ತೊಬ್ಬ ವಕೀಲ ಕಟ್ಟೇಮಳಲವಾಡಿ ಗ್ರಾಮದ ಅಶೋಕ ನದಿ ಈಜಿ ದಡ ಸೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂವರು ವಕೀಲರು ಹುಣಸೂರು ತಾಲ್ಲೂಕಿನಿಂದ ಎಚ್.ಡಿ.ಕೋಟೆ ನ್ಯಾಯಾಲಯಕ್ಕೆ ತಮ್ಮ ಕಕ್ಷಿದಾರರ ಮೊಕದ್ದಮೆ ನ್ಯಾಯಲಯದ ವಿಚಾರಣೆ ಮೇಲೆ ಬಂದಿದ್ದರು.
ಈ ಸಂದರ್ಭದಲ್ಲಿ ವಿಚಾರಣೆ ಮುಗಿದ ನಂತರ ಮೂವರು ತಮ್ಮ ಕಾರಿನಲ್ಲಿ ಕಬಿನಿ ಜಲಾಶಯ ವೀಕ್ಷಣೆ ಮಾಡಲು ಸರಗೂರು ಮಾರ್ಗವಾಗಿ ತೆರಳಿ, ಜಲಾಶಯ ವೀಕ್ಷಣೆ ಮಾಡಿದ ನಂತರ ಅದೇ ಮಾರ್ಗವಾಗಿ ವಾಪಸ್ ಸಾಗರೆ ಗ್ರಾಮದ ಬಳಿ ಬರುತ್ತಿದ್ದಾಗ ಸಾಗರೆ ಗ್ರಾಮದ ಬಳಿ ಸರಗೂರು ಪಟ್ಟಣಕ್ಕೆ ಹೋಗುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಬಿನಿ ಬಲದಂಡೆ ನಾಲೆ ತುಂಬಿ ಹರಿಯುತ್ತಿದ್ದ ನದಿಗೆ ನೇರವಾಗಿ ಬಿದ್ದಿದೆ.
ಕಾರು ನಾಲೆಗೆ ಬಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಇದ್ದ ಮೂವರು ಕಾರಿನ ಡೋರ್ ತೆಗೆದು ಹೊರಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಮೂವರು ನೀರಿನಲ್ಲಿ ಮುಳುಗುತ್ತಿದ್ದನ್ನು ಗಮನಿಸಿದ ದಾರಿ ಹೋಕರು ಮೂವರನ್ನೂ ರಕ್ಷಿಸಲು ಹಗ್ಗ ಎಸೆದು ಹಗ್ಗ ಹಿಡಿಯುವಂತೆ ಕೂಗಿ ಹೇಳಿದ್ದಾರೆ. ಅಶೋಕ ಎಂಬುವವರು ಹಗ್ಗ ಹಿಡಿದು ಮೇಲೆ ಬಂದರೆ, ಇನ್ನೂ ಇಬ್ಬರೂ ಹಗ್ಗ ಹಿಡಿಯಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದಾರೆ.
ಇವರಲ್ಲಿ ಗಿರೀಶ್ ಮತ್ತು ದಿನೇಶ್ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹಗಳ ಪತ್ತೆಗೆ ಹುಡುಕಾಟ ನಡೆದಿದೆ. ಕಬಿನಿ ಬಲದಂಡೆ ನಾಲೆಗೆ ಜಲಾಶಯದಿಂದ ಹೆಚ್ಚು ನೀರು ಬಿಟ್ಟಿರುವುದರಿಂದ, ನಾಲೆ ನೀರು ನಿಲ್ಲಿಸಿದ ನಂತರ ಮೃತದೇಹಗಳು ಸಿಗಲಿದೆ.
ಘಟನೆಗೆ ಸಂಬಂಧಿಸಿದಂತೆ ಸರಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡು, ಮೃತದೇಹಗಳ ಪತ್ತೆಗೆ ಮುಂದಾಗಿದ್ದಾರೆ.
ನಿತ್ರಾಣ ಗೊಂಡಿರುವ ವಕೀಲ ಅಶೋಕನನ್ನು ಸಾರ್ವಜನಿಕರು ಸರಗೂರಿನ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz