ಚಿತ್ರದುರ್ಗ, ಸೆಪ್ಟೆಂಬರ್, 29: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಉಳಿದಿದೆ. ಈಗಿನಿಂದಲೇ ಟಿಕೆಟ್ ಖಾತ್ರಿ ಪಡಿಸಿಕೊಳ್ಳಲು ಟಿಕೆಟ್ ಆಕಾಂಕ್ಷಿಗಳು ಆಯಾ ಪಕ್ಷದ ವರಿಷ್ಠರ ಬೆನ್ನು ಬಿದ್ದಿದ್ದಾರೆ. 2018ರ ಜೆಡಿಎಸ್ ಪರಾಜಿತ ಅಭ್ಯರ್ಥಿ, ಕ್ಯಾಸಿನೊ ದೊರೆ ಹಾಗೂ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ ಸೇರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
“ಭಾರತ್ ಜೋಡೋ” ಪಾದಯಾತ್ರೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಂಗಳವಾರ ಚಿತ್ರದುರ್ಗಕ್ಕೆ ಬಂದಿದ್ದರು. ಆಗ ಪಪ್ಪಿ ಅವರಿಗೆ ಟಿಕೆಟ್ ನೀಡುವಂತೆ ಅಭಿಮಾನಿಗಳು ಭಾವಚಿತ್ರ, ಫೋಟೋ ಹಿಡಿದು ಡಿ.ಕೆ.ಶಿವಕುಮಾರ್ ಬಳಿ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿದೆ ಎನ್ನಬಹುದು.
2018ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸುಮಾರು 49 ಸಾವಿರ ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು. 2023ಕ್ಕೆ ಚಿತ್ರದುರ್ಗ ಕ್ಷೇತ್ರ ಬಿಟ್ಟು, ಹೊಸ ಕನಸು ಹೊತ್ತು ಹಿರಿಯೂರು ಕಡೆ ಮುಖ ಮಾಡಿದ್ದರು. 2023ರಲ್ಲಿ ಹಿರಿಯೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪಪ್ಪಿ ಅವರು ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ಸಭೆಯಲ್ಲಿ ಪರೋಕ್ಷವಾಗಿ ಪಕ್ಷ ಸಂಘಟನೆ ಮಾಡಲು ತಿಳಿಸಿದ್ದರು.
ಜೆಡಿಎಸ್ ವರಿಷ್ಠರ ಮಾತಿನಂತೆ ಪಪ್ಪಿ ಅವರು ಹಿರಿಯೂರಿನ ಶ್ರೀ ತೇರು ಮಲ್ಲೇಶ್ವರ ಹಾಗೂ ಶ್ರೀ ಕಣಿವೆ ಮಾರಮ್ಮನ ದೇವರಿಗೆ ಪೂಜೆ ಸಲ್ಲಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಉದ್ಯಮಿ ವೀರೇಂದ್ರ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎಂದು ಕ್ಷೇತ್ರದಲ್ಲಿ ಸುದ್ದಿಯೂ ಹರಿದಾಡಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯ ಕೆಲವು ಮುಖಂಡರು ನಮಗೆ ಟಿಕೆಟ್ ನೀಡಬೇಕು. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಟಿಕೆಟ್ ಕೊಡಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು.
ಇನ್ನು ಚುನಾವಣೆ ಸ್ಪರ್ಧೆಗೆ ಆರಂಭದಲ್ಲೇ ಅಡ್ಡಗಾಲು ಬಂದ ಹಿನ್ನೆಲೆಯಲ್ಲಿ ಮತ್ತೆ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರು, ಅಭಿಮಾನಿಗಳು ಪಟ್ಟು ಹಿಡಿದರು. ಇದರ ಬೆನ್ನಲ್ಲೇ ಪಪ್ಪಿ ಅವರಿಗೆ ಜೆಡಿಎಸ್ ಎಂಎಲ್‌ಸಿ ಸ್ಥಾನ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ಜೆಡಿಎಸ್ ಮುಖಂಡ ಶರವಣ ಅವರನ್ನು ಎಂಎಲ್‌ಸಿ ಮಾಡಲಾಯಿತು.
ಇತ್ತ ಹಿರಿಯೂರಿನಲ್ಲಿ ಟಿಕೆಟ್ ಸಿಗುತ್ತದೆ ಎಂದು ಅಂದುಕೊಂಡಿದ್ದ ಪಪ್ಪಿಗೆ ಎಂಎಲ್‌ಸಿ ಸ್ಥಾನವೂ ಸಿಗಲಿಲ್ಲ. ಜೆಡಿಎಸ್ ಪಕ್ಷದಲ್ಲಿ ಸರಿಯಾದ ಮನ್ನಣೆ ಸಿಗಲಿಲ್ಲ ಎಂದು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಸಾರ್ವಜನಿಕ ವಲಯದಲ್ಲಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಭಿಮಾನಿಗಳು ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಟಿಕೆಟ್ ನೀಡುವಂತೆ ಮನವಿ ಮಾಡಿರುವುದು ಗಮನಾರ್ಹವಾಗಿದೆ.
ಚಿತ್ರದುರ್ಗದ ಬಿಜೆಪಿ ಶಾಸಕ ಬಲಿಷ್ಠ ಜಿ.ಹೆಚ್. ತಿಪ್ಪಾರೆಡ್ಡಿ ಅವರನ್ನು ಸೋಲಿಸಲು ಎದುರಾಳಿ ಕಾಂಗ್ರೆಸ್ ಪಕ್ಷದಲ್ಲಿ ಯಾರು ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಒಂದು ಬಾರಿ ಎಂಎಲ್‌ಸಿ ಹಾಗೂ 5 ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರನ್ನು ಸೋಲಿಸಲು ಸುಲಭದ ಮಾತಲ್ಲ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಉದ್ಯಮಿ ವೀರೇಂದ್ರ ಪಪ್ಪಿ ಅವರು ಚಿತ್ರದುರ್ಗ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದಾರೆ.”ಭಾರತ್ ಜೋಡೋ” ಪಾದಯಾತ್ರೆ ಮುಗಿದ ಬಳಿಕ ವೀರೇಂದ್ರ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅವರು ಕಾಂಗ್ರೆಸ್ ಸೇರಿದರೆ ಮುಂದಿನ ಅವರ ನಡೆ ಹೇಗಿರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ಮತ್ತೊಂದೆಡೆ ನನಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದುಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿರುವ ಮಾಜಿ ಎಂಎಲ್‌ಸಿ ರಘು ಆಚಾರ್ ನಡೆ ಹೇಗಿರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


