ಬೆಳಗಾವಿ : ಕಳಸಾ ಬಂಡೂರಿ ಯೋಜನೆಗೆ ಅಂತಿಮವಾಗಿ ವಿಸ್ತೃತ ಯೋಜನಾ ವರದಿಗೆ ಒಪ್ಪಿಗೆ ದೊರೆತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 1988ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರು ಅಂದಿನ ಮುಖ್ಯಮಂತ್ರಿ ರಾಣೆ ಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ನಂತರ ಗೋವಾದಲ್ಲಿ ಬಂದ ಸರ್ಕಾರಗಳು ಇದನ್ನು ಕಾರ್ಯಗತಗೊಳಿಸದೆ ವಿರೋಧಿಸಿದ್ದರು. ಒಟ್ಟಾರೆ ಮಹದಾಯಿ ಯೋಜನೆಗೆ ಮೊದಲು ಚಿಂತನೆ ಮಾಡಿದ್ದು ಬದಾಮಿ ಶಾಸಕ ಬೆಟಗೇರಿ ಹಾಗೂ ಆರ್.ಟಿ. ದೇಸಾಯಿಯವರು. ಬೆಟಗೇರಿ ಯವರು ಬದಾಮಿಯಿಂದ ಪಾದಯಾತ್ರೆ ಮಾಡಿದ್ದರು. ನಂತರ ಕರ್ನಾಟಕಕ್ಕೆ ನೀರು ಮತ್ತು ಅವರಿಗೆ ವಿದ್ಯುತ್ ನೀಡುವುದು ಎಂದಾಗಿತ್ತು. ಇದು ಮೂಲ ಕೆಪಿಸಿ ಆರಂಭಿಸಿದ ಯೋಜನೆ. ನಂತರ ನಮಗೆ ನೀರಿನ ಕೊರತೆಯಾಗುತ್ತಿತ್ತು ಎಂದರು.
ಮಲಪ್ರಭಾ ನದಿ ಕಾಕಂಬಿಯಲ್ಲಿ ಹುಟ್ಟಿ, ಮಹದಾಯಿ ನದಿಗೆ ತಿರುವು ನೀಡಬೇಕೆಂದು ನಿರ್ಧಾರವಾಗಿತ್ತು. ಮುಂದೆ ವಿರೋಧ ಎದುರಾದಾಗ ನಂತರ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯಾಗಿತ್ತು. ಹೆಚ್.ಕೆ.ಪಾಟೀಲ ಅವರು ಆಗ ನೀರಾವರಿ ಸಚಿವರಾಗಿದ್ದರು. ಅದಕ್ಕೂ ಗೋವಾ ವಿರೋಧಿಸಿತು. ಅಂತರರಾಜ್ಯ ಜಲ ವಿವಾದವಾಯಿತು. ಹಲವಾರು ಪ್ರಯತ್ನಗಳಾದರೂ ಏನೂ ಆಗಲಿಲ್ಲ. ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರ ಸಮಿತಿ ಸ್ಥಾಪಿಸಿ 253 ಕಿಮೀ ಪಾದಯಾತ್ರೆಯನ್ನೂ ಮಾಡಲಾಯಿತು. ಆದರೂ ಆಗಲಿಲ್ಲ. 2009 ರಲ್ಲಿ ಗೋವಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಯವರು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದರು. ಒಂದು ಹನಿ ನೀರನ್ನೂ ತಿರುಗಿಸಲು ಬಿಡುವುದಿಲ್ಲ ಎಂದಿದ್ದರು. ಪತ್ರಿಕೆಯಲ್ಲಿಯೂ ವರದಿಯಾಗಿತ್ತು. ಅರಣ್ಯೇತರ ಪ್ರದೇಶದಲ್ಲಿ ಕೆಲಸ ಪ್ರಾರಂಭ ಮಾಡುವುದು ಎಂದು ತೀರ್ಮಾನಿಸಿ, ಈಶ್ವರಪ್ಪ ನೀರಾವರಿ ಸಚಿವರು ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿ, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಅಧಿಕಾರಿಗಳ ಮನವೊಲಿಸಿ ಮಂಡಳಿಯಲ್ಲಿ ಪಾಸ್ ಮಾಡಿಸಲಾಯಿತು. ಕೊನೆಗೆ ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪ ಅವರು ಗಟ್ಟಿಯಾಗಿ ಹಿಡಿದರು. ಕಡೆಗೆ ಕುಮಾರಸ್ವಾಮಿಯವರೂ ಒಪ್ಪಬೇಕಾಯಿತು. ಅವರೇ ಅಡಿಗಲ್ಲು ಹಾಕಿ ಕೆಲಸ ಪ್ರಾರಂಭವಾಯಿತು. ಪೂರ್ಣಪ್ರಮಾಣದ ಕೆಲಸವಾಗಲಿಲ್ಲ.
ನಾನು ನೀರಾವರಿ ಸಚಿವನಾದ ಮೇಲೆ ಅದನ್ನು ಪೂರ್ಣ ಪ್ರಮಾಣದಲ್ಲಿ ಟೆಂಡರ್ ಕರೆದು, 5 ಕಿಮೀ.ಇಂಟರ್ ಲಿಂಕಿಂಗ್ ಕಾಲುವೆಯ ಕಾಮಗಾರಿ ನಮ್ಮ ಅವಧಿಯಲ್ಲಿ ಮಾಡಲಾಯಿತು. ಮುಂದೆ ಬಂದ ಸರ್ಕಾರಗಳು ಏನೂ ಕ್ರಮ ವಹಿಸಲಿಲ್ಲ. ಅಷ್ಟರಲ್ಲಿ ಗೋವಾದವರು ಸುಪ್ರೀಂ ಕೋರ್ಟ್ ಗೆ ಹೋದರು. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಮಂಡಲಿ ರಚಿಸುವುದಾಗಿ ಅಫಿಡವಿಟ್ ನೀಡಿದರು. ಸಣ್ಣ ವ್ಯಾಜ್ಯಕ್ಕೆ ನ್ಯಾಯಮಂಡಲಿ ಬೇಕಿಲ್ಲ ಎಂದು ವಾದಿಸಿದರೂ, ಕೇಂದ್ರ ಸರ್ಕಾರ ಈ ನಿಲುವು ತಾಳಿದ್ದಕ್ಕೆ ಟ್ರಿಬ್ಯುನಲ್ ರಚನೆಯಾಯಿತು. ಇದಾದರೂ 2- 3 ವರ್ಷ ಏನೂ ಕೆಲಸವಾಗಲಿಲ್ಲ. ಪುನಃ ಪ್ರತಿಭಟನೆ ಯಾದ ನಂತರ ಕೆಲಸ ಪ್ರಾರಂಭವಾಯಿತು. ಸುಮಾರು 45 ವರ್ಷ ನ್ಯಾಯಮಂಡಲಿ ವಿಚಾರಣೆ ನಡೆದು ನರೇಂದ್ರ ಮೋದಿಯವರ ಸರ್ಕಾರದಲ್ಲಿ ಟ್ರಿಬ್ಯುನಲ್ ಆದೇಶಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ನರೇಂದ್ರ ಮೋದಿಯವರ ಸರ್ಕಾರ ಅಧಿಸೂಚನೆ ಹೊರಡಿಸುವ ಮೂಲಕ ತಮ್ಮ ಬದ್ಧತೆ ತೋರಿಸಿದ್ದಾರೆ. ನ್ಯಾಯಮಂಡಲಿ ನಿರ್ದೇಶನ ಕೊಡುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ನೀರನ್ನು ಬಳಕೆ ಮಾಡುವುದಿಲ್ಲ ಎಂದು ಅಫಿಡವಿಟ್ ಹಾಕಿತು. ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ಇಂಟರ್ ಲಿಂಕಿಂಗ್ ಕಾಲುವೆಗೆ ಗೋಡೆ ಕಟ್ಟಿದರು. ಇದು ಅವರ ಸಾಧನೆ. ಇಡೀ ಭಾರತದಲ್ಲಿ ಯಾವುದಾದರೂ ಯೋಜನೆಗೆ ಗೋಡೆ ಕಟ್ಟಿರುವುದು ಇದು ಬಿಟ್ಟರೆ ಮತ್ತೊಂದಿಲ್ಲ ಎಂದರು.
ಎಲ್ಲ ಅಡಚಣೆಗಳು ದೂರವಾಗಿ ಪರಿಸರ ಹಾಗೂ ಅಂತರರಾಜ್ಯ ವ್ಯಜ್ಯಾಗಳನ್ನೂ ಗಮನದಲ್ಲಿರಿಸಿಕೊಂಡು ಡಿಪಿಆರ್ ಸಿದ್ಧಪಡಿಸಿ, ಒಪ್ಪಿಗೆಯನ್ನೂ ಪಡೆಯಲಾಗಿದೆ. ಡಿಪಿಆರ್ ನಲ್ಲಿ ಹೈಡ್ರೋಲಜಿ ಮತ್ತು ಅಂತರರಾಜ್ಯ ವ್ಯಾಜ್ಯಗಳ ಅಂಶಗಳನ್ನೂ ಕ್ಲಿಯರ್ ಮಾಡಿಕೊಳ್ಳಲಾಗಿದೆ. ನಮ್ಮ ದಾರಿ ಸುಗಮವಾಗಿದ್ದು, ಡಿಪಿಆರ್ ನ ಆದೇಶ ಬಂದಕೂಡಲೇ, ಟೆಂಡರ್ ಕರೆದು, ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
30 ವರ್ಷದ ಹೋರಾಟಕ್ಕೆ ಜಯ ದೊರೆತಿರುವುದು ಇಡೀ ಉತ್ತರ ಕರ್ನಾಟಕದ ರೈತರಿಗೆ ಜಯ ಸಿಕ್ಕಂತಾಗಿದೆ. ಹಿಂದೆ ಈ ವಿಷಯವಾಗಿ ಆದ ಹೋರಾಟದಲ್ಲಿ ರೈತರ ಮೇಲೆ ಲಾಠಿ ಪ್ರಹಾರವಾಯಿತು. ಇವರೆಲ್ಲರಿಗೂ ಜಯ ಸಿಕ್ಕಿದೆ. ನಾವು ಪ್ರಾರಂಭಿಸಿದ ಹೋರಾಟಕ್ಕೆ ನಾನು ಮುಖ್ಯಮಂತ್ರಿಯಾಗಿರುವ ಹಾಗೂ ಬೆಳಗಾವಿ ಅಧಿವೇಶದ ಸಂದರ್ಭದಲ್ಲಿ ಜಯ ಸಂದಿರುವುದು ಅತ್ಯಂತ ಸಂತೋಷವನ್ನು ತಂದಿದೆ.
ಟ್ರಿಬ್ಯುನಲ್ ನಲ್ಲಿ ಆಧಿಸೂಚನೆ ಹೊರಡಿಸಿರುವುದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಹೋರಾಟದಲ್ಲಿ ಭಾಗಿಯಾಗಿರುವ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಯೋಜನೆಯ ಮೂಲಸ್ವರೂಪದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


