ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆಹಾರ ನಿರೀಕ್ಷಕರು , ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಹಿರಿಯೂರು ಸಿರಿಗನ್ನಡ ನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿತ್ತು.
ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ರಂಜಿತ ಲಾಡ್ಜ್ ಬಳಿಯಿಂದ ಮೆರವಣಿಗೆ ಆರಂಭಿಸಿ, ತಾಲ್ಲೂಕು ಕಛೇರಿಯವರೆಗೂ ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ಹಿರಿಯೂರು ಕಂದಾಯ, ಆಹಾರ ನಿರೀಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕುಂದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಕಂದಾಯ, ಆಹಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿ ಯಾವುದೇ ಸಮಸ್ಯೆ ತೆಗೆದುಕೊಂಡು ಹೋದರೂ ಉಡಾಫೆಯ ಮಾತುಗಳನ್ನಾಡುತ್ತಾರೆ. ಸರ್ಕಾರದಿಂದ ಬಡವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿದರೆ ದರ್ಪದ ಉತ್ತರ ನೀಡುತ್ತಾರೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದರು.
ಅಧಿಕಾರಿಗಳ ಉದಾಸೀನ ಮನೋಭಾವ , ಭ್ರಷ್ಟತನ ಸಾರ್ವಜನಿಕರ ಗಮನಕ್ಕೂ ಬಂದಿದೆ. ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಸಾರ್ವಜನಿಕರಿಗೆ ಸಕಾಲದಲ್ಲಿ ಕೆಲಸಗಳು ಆಗುವಂತೆ ನೋಡಬೇಕು ಮತ್ತು ಮೇಲಾಧಿಕಾರಿಗಳು ವಾರಕ್ಕೊಮ್ಮೆಯಾದರೂ ಸಾರ್ವಜನಿಕರ ಅಹವಾಲು ಆಲಿಸಬೇಕು. ಸಾರ್ವಜನಿಕರ ಜೊತೆಗಿನ ಅಸಭ್ಯ ವರ್ತನೆ ತೋರಿರುವ ಆಹಾರ , ಕಂದಾಯ ಹಾಗೂ ಶಿಕ್ಷಣಾಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಯಿತು.
ಪ್ರತಿಭಟನೆಯ ಬಳಿಕ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಹಿರಿಯೂರು ತಾಲ್ಲೂಕಿನ ಸಾರ್ವಜನಿಕರು, ಹಿರಿಯೂರು ತಾಲ್ಲೂಕಿನ ತಾಲ್ಲೂಕು ಕಛೇರಿಗಳಲ್ಲಿ ತಾಲ್ಲೂಕು ಕಛೇರಿಗೆ ಸಂಬಂಧಪಟ್ಟಂತಹ ತಾಲ್ಲೂಕು ದ್ವಿದಸ ಸಹಾಯಕರಾಗಿದ್ದವರು ನಿಧನ ಹೊಂದಿ ಇದೀಗ 3 ವರ್ಷಗಳೇ ಕಳೆದರೂ ಸಮೇತ ಆ ಜಾಗಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನು ನೇಮಿಸದೆ ಹೊರಗುತ್ತಿಗೆದಾರರನ್ನು ನೇಮಿಸಿದ್ದಾರೆ. ಇಲ್ಲಿಯ ಡಾಟಾ ಎಂಟ್ರಿ ಆಪರೇಟರ್ ಗಳು ಸಮೇತ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ದರ್ಪ ಮಾತನ್ನು ಆಡುತ್ತಾರೆ ಎಂದು ಆರೋಪಿಸಿದರು.
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ದ್ವಿದಸ ಸಹಾಯಕರು ಪ್ರತಿಯೊಂದಕ್ಕೂ ಲಂಚ ಕೇಳುತ್ತಿದ್ದಾರೆ. ಲಂಚ ಕೊಡದವರ ವಿರುದ್ಧ ದರ್ಪ ತೋರುತ್ತಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳು ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಸಾರ್ವಜನಿಕರಿಗೆ ಸರ್ಕಾರಿ ಸೇವೆ ಒದಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸೈಯದ್ ಜಬ್ಬಾರ್ , ಉಪಾಧ್ಯಕ್ಷ ಕರಿಯಣ್ಣ , ಖಜಾಂಚಿ ಹನುಮಂತಪ್ಪ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ್ , ಸಂಚಾಲಕ ಸೈಯದ್ ಸದ್ದಾರಿ , ಕಾರ್ಯಕಾರಿಣಿ ಸದಸ್ಯರಾದ ಕರಿಯಪ್ಪ , ರಹಮತ್ ಉಲ್ಲಾ , ಸುಭಾನ್ , ನರಸಿಂಹಮೂರ್ತಿ , ಅಫೈಲ್ ಖಾನ್ , ಕಣುಮಪ್ಪ , ರಾಮಚಂದ್ರರಾವ್ , ರಂಗಸ್ವಾಮಿ , ದಾದಾಪೀರ್ , ಸತೀಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು .
ವರದಿ: ಮುರುಳಿಧರನ್ ಆರ್.. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB