ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಭಕ್ತಿ-ಸಂಭ್ರಮಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ಒಂದೆಡೆ ಬದುಕಿಗೆ ಕೃಷಿ ನಂಬಿರುವ ರೈತರು ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತ ಬಂದು ಒಳ್ಳೆಯ ಮಳೆ-ಬೆಳೆಗೆ ಪ್ರಾರ್ಥಿಸುತ್ತಿದ್ದರೆ, ಮತ್ತೊಂದೆಡೆ ನವ ವಿವಾಹಿತೆಯರು ತವರಿನಿಂದ ಹಸಿರು ಬಳೆ-ಮಡಿಲಕ್ಕಿ ಉಡುಗೊರೆ ಸ್ವೀಕರಿಸಿದರು. ಈ ನಡುವೆ ಎಳೆಯ ಮಕ್ಕಳು ಬೆಂಡು-ಬತ್ತಾಸು ಚಪ್ಪರಿಸುತ್ತ ಸಡಗರದಿಂದ ಓಡಾಡಿದರು.
ಜಲಾಶಯದಲ್ಲಿ ನೀರಿನಮಟ್ಟ ಕುಸಿದಿರುವ ಕಾರಣ ಜಾತ್ರೆಗೆ ಬಂದ ಭಕ್ತರಲ್ಲಿ ಸ್ವಲ್ಪಮಟ್ಟಿನ ಬೇಸರ ಕಂಡುಬಂತು. ಇವು ಶುಕ್ರವಾರ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.
ನೂರಾರು ವರ್ಷದ ಇತಿಹಾಸ ಹೊಂದಿರುವ ಕಣಿವೆ ಮಾರಮ್ಮ ದೇವಿ ವಾಣಿ ವಿಲಾಸ ಜಲಾಶಯದ ರಕ್ಷಕಿ ಎಂಬ ನಂಬಿಕೆ ಇದೆ. ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿ ವಿಲಾಸ ಅಣೆಕಟ್ಟೆ ನಿರ್ಮಿಸಲಾಗಿದೆ. ಎರಡು ಗುಡ್ಡಗಳ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲ ಇರುವ ಕಾರಣ ಕಣಿವೆ ಮಾರಮ್ಮ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತಿದೆ.

ಸ್ಥಳೀಯರಲ್ಲದೆ, ತಮಿಳುನಾಡು, ಆಂಧ್ರಪದೇಶದಿಂದ ರೈತರು ಈ ಜಾತ್ರೆಗೆ ಬಂದು ಹರಕೆ ಸಲ್ಲಿಸುವುದು ಪ್ರತಿವರ್ಷ ನಡೆದುಕೊಂಡು ಬಂದ ವಾಡಿಕೆ. ಶುಕ್ರವಾರ ಬೆಳಿಗ್ಗೆ ದೇವಿಗೆ ತಂಬಿಟ್ಟಿನ ಆರತಿ, ಬೇವಿನ ಸೇವೆ ಸಲ್ಲಿಸಲಾಯಿತು. ಸಂಜೆ ನಾಲ್ಕು ಗಂಟೆಗೆ ದೇವಿಯ ರಥೋತ್ಸವ ಸಾವಿರಾರು ಭಕ್ತರ ಭಕ್ತಿ-ಸಂಭ್ರಮದ ನಡುವೆ ನೆರವೇರಿತು.
ಜಾತ್ರೆಯ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಕನ್ನಡಿಗರ ಆರಾಧ್ಯದೈವ ವಾದ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಪ್ರದರ್ಶಿಸಿದ ಪುನೀತ್ ಅಭಿಮಾನಿಗಳು ಹೇಳಲಾಗದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಣಿವೆ ಮಾರಮ್ಮನ ಜಾತ್ರೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೋಮಶೇಖರ್ ಬಿ. ಅವರು ಸಹ ಕಣೆವೆ ಮಾರಮ್ಮನ ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ಜಾತ್ರೆಗೆ ಆಗಮಿಸಿದ ಕಾಂಗ್ರೆಸ್ ಮುಖಂಡ ಸೋಮಶೇಖರ್ ಬಿ. ಅವರನ್ನು ತಮಟೆ ಡೋಲು ಭಾರಿಸುವುದರ ಮೂಲಕ ಅದ್ದೂರಿಯಾಗಿ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯ ಅಧಿಕಾರಿಗಳು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ನಮ್ಮ ತುಮಕೂರು ಮಾಧ್ಯಮದ ಮೂಲಕ ಮಾತನಾಡಿದ ಸ್ಥಳೀಯ ಗ್ರಾಮಸ್ಥರು, ಕಾಂಗ್ರೆಸ್ ಪಕ್ಷದ ಸೋಮಶೇಖರ್ ಬಿ. ಅವರು ಕಳೆದ ಭಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು. ಆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರು ತಾಲ್ಲೂಕಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಜಯಶೀಲರಾಗಬೇಕೆಂಬುದೇ ನಮ್ಮೆಲ್ಲರ ಆಸೆಯಾಗಿದೆ ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡುಗಳು , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಬಿ. ಪಾಪಣ್ಣ , ನಿಜಲಿಂಗಪ್ಪ, ಪ್ರಸಾದ್, ಯೋಗೇಶ್ ಡಿ.ಕೆ. , ಅನಿಲ್ ಭೀಮಸಮುದ್ರ, ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


