ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ ಪೂಜೆ ಸಲ್ಲಿಸಿ ಗೌರವಪೂರ್ವಕವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನಗಿರಿಯಿಂದ ಪ್ರಾರಂಭಗೊಂಡು ರಾಜ್ಯದಾದ್ಯಂತ ಸಂಚರಿಸುತ್ತಾ ಕನ್ನಡ ಮಾತೆಯು ನಮ್ಮನ್ನು ಹುಡುಕಿ ಗಡಿನಾಡಿಗೆ ಬಂದಿರುವುದು ಸಂತೋಷದ ವಿಷಯ. ಗಡಿನಾಡಿನ ಜನತೆಯು ರಥ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಕ್ಕೆ ಧನ್ಯವಾದಗಳು ಎಂದರು.
ಗ್ರಾಮಕ್ಕೆ ಆಗಮಿಸಿದ ಸಾಹಿತ್ಯ ಸಮ್ಮೇಳನದ ಜನ ಜಾಗೃತಿ ರಥವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಹೊ.ಮ.ನಾಗರಾಜು, ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿಯ ಅಧ್ಯಕ್ಷ ಎ.ಓ.ನಾಗರಾಜು, ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಐ.ಎ.ನಾರಾಯಣಪ್ಪ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆತ್ಮೀಯವಾಗಿ ಬರಮಾಡಿಕೊಂಡರು.
ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು, ಮಹಿಳೆಯರು ಮತ್ತು ಕನ್ನಡಾಭಿಮಾನಿಗಳು ನಾಡದೇವಿಯ ಪುತ್ಥಳಿಗೆ ಪುಷ್ಪಾಚರಣೆ ಮಾಡಿ ಕನ್ನಡ ಭಕ್ತಿ ಮೆರೆದರು.
ಗ್ರಾಮದಲ್ಲಿ ನಡೆದ ಅದ್ದೂರಿ ಪುರಮೆರವಣಿಗೆಯು ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ಎಂಜಿ ರಸ್ತೆಯ ಸಾಗಿ ಮಹಾತ್ಮ ಗಾಂಧೀಜಿ ವೃತ್ತದ ಮೂಲಕ ಬೆಸ್ತರ ಹಳ್ಳಿ ರಸ್ತೆ ಸಾಗಿ ಸಂತೆ ಊರು ಬಾಗಿಲು ಬಳಿ ಕೊನೆಗೊಂಡಿತು. ರಥಯಾತ್ರೆಯ ಪುರಮೆರವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಕುಂಭ ಕಳಶಗಳನ್ನು ಹೊತ್ತು ಭಾಗವಹಿಸಿದ್ದರು. ಕನ್ನಡ ಭಾವುಗಳನ್ನು ಹಿಡಿದ ಶಾಲಾ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂತಸಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಗ್ರೇಡ್ 2 ತಹಶೀಲ್ದಾರ್ ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಅಧಿಕಾರಿ ಬಿ.ವಿ.ಮಾರುತಿ ಪ್ರಸಾದ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಕಂದಾಯ ನಿರೀಕ್ಷಕ ರಾಜಗೋಪಾಲ್, ಪಿ.ಎಸ್.ಐ ರಾಮಚಂದ್ರಪ್ಪ, ಗ್ರಾ.ಪಂ ಕಾರ್ಯದರ್ಶಿ ಹನುಮಂತರಾಯಪ್ಪ, ಸದಸ್ಯರಾದ ನಂದೀಶ್, ಅಂಗನವಾಡಿ ಮೇಲ್ವಿಚಾರಕಿ ವಿಜಯಲಕ್ಷ್ಮಿ, ಕಸಾಪ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮುದ್ರಾಡಿ, ರಾಮಲಿಂಗಯ್ಯ ಇದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q