ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಯುಜಿಸಿ – ಎನ್ ಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ಹೇಳಿದರು.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಾನು ಮೊದಲಿನಿಂದಲೂ ಹೇಳುತ್ತಿರುವ ಮಾತಿದು. ಈ ಮಾತು ಪದೇಪದೆ ಮರುಕಳಿಸುತ್ತಿರುವುದು ನನಗೆ ಬಹಳ ನೋವುಂಟು ಮಾಡಿದೆ. ಕೇಂದ್ರ ಸರಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಎಂದು ಹೇಳಿದ್ದಾರೆ.
ನಿನ್ನೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಯುಜಿಸಿ – ಎನ್ ಇಟಿ ಕನ್ನಡ ಐಚ್ಛಿಕ ಭಾಷಾ ಪಶ್ನೆ ಪತ್ರಿಕೆಯ 100 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹಿಂದಿಯಲ್ಲೇ ಇದ್ದವು. ಅದನ್ನು ಕಂಡ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿ ಪರೀಕ್ಷೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಇದು ಕನ್ನಡದ ಮೇಲಿನ ತಾತ್ಸಾರ ಹಾಗೂ ಹಿಂದಿ ಹೇರಿಕೆಯ ವಿಪರೀತ. ಅಲ್ಲದೆ, ಪರೀಕ್ಷೆ ನಡೆಸಿದ ಸಂಸ್ಥೆ ಮಾಡಿರುವ ಕನ್ನಡ ದ್ರೋಹ. ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯಗಳನ್ನು ಕನ್ನಡದ ವಿರುದ್ಧ ಎಸಗಲಾಗುತ್ತಿದೆ. ಕನ್ನಡಿಗರ ಬಗ್ಗೆ ಈ ಕಠಿಣತೆ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರಕಾರದ ಇನ್ನು ಹಲವಾರು ಉದ್ಯೋಗ ಅವಕಾಶಗಳಲ್ಲಿ ಕನ್ನಡದ ಪ್ರತಿಭಾವಂತ ಯುವಜನರಿಗೆ ಅನ್ಯಾಯ ಆಗುತ್ತಿದೆ. ಕನ್ನಡಿಗರ ಕಡೆಗಣನೆ ದೇಶಕ್ಕೆ ಒಳ್ಳೆಯದಲ್ಲ. ನಮ್ಮ ಮೌನ ನಮ್ಮ ದೌರ್ಬಲ್ಯವಲ್ಲ ಎಂಬುದು ನೆನಪಿರಲಿ ಎಂದು ಅವರು ಎಚ್ಚರಿಸಿದರು.
ಈ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೂಡಲೇ ಪರಿಕ್ಷಾ ಸಂಸ್ಥೆಯು ಆಗಿರುವ ಲೋಪ ಸರಿಮಾಡಿ ಪುನಾ ಪರೀಕ್ಷೆ ನಡೆಸಬೇಕು. ಎರಡು ವರ್ಷಗಳಿಂದ ಪರಿಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ ಕ್ರಮ ವಹಿಸಬೇಕು ಎಂದು ಅವರು ಕರೆ ನೀಡಿದರು.
ಪರೀಕ್ಷೆ ಅವ್ಯವಸ್ಥೆ ಆಗರವಾಗಿತ್ತು ಎನ್ನುವುದು ತಿಳಿದುಬಂದಿದೆ. ಅದನ್ನು ಸರಿಪಡಿಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy