ಕೊರಟಗೆರೆ: ನಮ್ಮ ಕರ್ನಾಟಕ ಕೇವಲ ಒಂದು ಪ್ರದೇಶವಲ್ಲ ಅದು ಶ್ರೀಮಂತ ಸಂಸ್ಕೃತಿ, ಭವ್ಯ, ಇತಿಹಾಸ ಮತ್ತು ಪ್ರಕೃತಿಯ ಸೌಂದರ್ಯವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಪುಣ್ಯಭೂಮಿ ಎಂದು ತಹಶೀಲ್ದಾರ್ ಕೆ.ಮಂಜುನಾಥ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾದ 70ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡದಲ್ಲಿ ಲಿಪಿಯನ್ನು ಮುಂದಿನ ಜನಾಂಗಕ್ಕೂ ಬರೆಯಲು ಕಲಿಸಿದಾಗ ಮಾತ್ರ ಈ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಕನ್ನಡ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಕುವೆಂಪು ಅವರು ಹೇಳುವಂತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ವಿವಿಧತೆಯಲ್ಲಿ ಏಕತೆ ನೆಲೆಸಿದೆ. ಕನ್ನಡನಾಡು ಸಂಪನ್ಮೂಲ ಹಾಗೂ ಸಂಸ್ಕೃತಿಯಿಂದ ಶ್ರೀಮಂತವಾಗಿದೆ ಎಂದು ಹೇಳಿದರು.
ಆದಿಕವಿ ವಾಲ್ಮೀಕಿಯಿಂದ ಆರಂಭವಾಗಿ ಪಂಪ, ರನ್ನ ಮೊದಲಾದ ಕವಿಗಳು ತಮ್ಮ ಕಾವ್ಯದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಮನದುಂಬಿ ಹೊಗಳಿದ್ದಾರೆ. ಕರ್ನಾಟಕವು ತನ್ನದೇ ಆದ ಸಾಂಸ್ಕೃತಿಕ, ಪಾರಂಪರಿಕ ಹಿನ್ನೆಲೆಯನ್ನು ಹೊಂದಿದ ರಾಜ್ಯವಾಗಿದೆ. ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ವೈವಿದ್ಯತೆ ಪಡೆದ ನಾಡಾಗಿದೆ ಎಂದು ಹೇಳಿದರು.
ರಾಜ್ಯೋತ್ಸವ ಪುರಸ್ಕೃತರಿಗೆ ಗೌರವ:
70ನೇ ವೈಭವ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದ ಪುರಸ್ಕೃತರಿಗೆ ತಾಲ್ಲೂಕು ಆಡಳಿತ ವಿಶೇಷ ಗೌರವಿಸಿ ಶುಭ ಹಾರೈಸಿದೆ.
ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ:
ತಾಲೂಕು ಆಡಳಿತ ಆಯೋಜಿಸಿದ ಕನ್ನಡ ಹಬ್ಬದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳು ಕನ್ನಡವನ್ನು ತಮ್ಮ ಕಾವ್ಯದಲ್ಲಿ ಮನದುಂಬಿ ಹೊಗಳಿದ ಕವಿಗಳ, ಹೋರಾಟಗಾರರ ವೇಷ ಭೂಷಣದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಜಿಸಿದ್ದು, ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಶಾಲಾ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ತಾ.ಪಂ ಇಓ ಅಪೂರ್ವ, ಸಿಪಿಐ ಅನಿಲ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾ.ಪಂ ಸದಸ್ಯರು, ಮುಖಂಡರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


