ಕಾರವಾರ: ಡಿಸೆಂಬರ್ 20 ರಿಂದ 22ರ ವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಗೆ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ರಾಜ್ಯದ ಏಕೈಕ ಕನ್ನಡಾಂಬೆ ಭುವನೇಶ್ವರಿ ದೇವಿಯ ದೇವಸ್ಥಾನದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಾನುವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಡ್ಯದಲ್ಲಿ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ಕಾರ್ಯಕ್ರಮ ನಡೆಯಿತು.
ನಂತರ ಮಾತನಾಡಿದ ಸಚಿವರು, ಕದಂಬರ ಆರಾಧ್ಯ ದೇವರಾದ ಭುವನೇಶ್ವರಿ ಪುಣ್ಯ ಕ್ಷೇತ್ರವಾದ ಜಿಲ್ಲೆಯಿಂದ ಪ್ರಾರಂಭವಾಗುವ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯದ 31 ಜಿಲ್ಲೆ ಸೇರಿದಂತೆ 6 ಬೇರೆ ಬೇರೆ ರಾಜ್ಯದ ಗಡಿ ಪ್ರದೇಶದಲ್ಲಿ ಸಂಚರಿಸಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ತಲುಪಲಿದೆ ಎಂದರು.
ವಿಶೇಷವಾಗಿ ಕರ್ನಾಟಕ ಎಂದು ನಾಮಕರಣವಾಗಿ 50ರ ಸಂಭ್ರಮವನ್ನು ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿದೆ ಅದೇ ರೀತಿ ಡಿ.20, 21 ಮತ್ತು 22 ರಂದು ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದ್ದು, 30 ಕೋಟಿ ಅನುದಾನ ಬಿಡುಗಡೆ ಮಾಡಲಿದೆ ಎಂದರು.
ಕನ್ನಡ ಸಾಹಿತ್ಯದ ಮೇಲಿನ ಗೌರವ ಮತ್ತು ಕರ್ನಾಟಕ ನಾಮಕರಣದ 50ರ ಸಂಭ್ರಮವನ್ನು ವಿಜೃಂಭಣೆಯಿಂದ ನಡೆಯಲು ಎಲ್ಲಾ ಕನ್ನಡ ಹೃದಯಗಳು ಸಹಕಾರ ನೀಡಬೇಕು. ಕನ್ನಡ ನಾಡಿನ ನೆಲ ಜಲ, ಭಾಷೆ ಹಾಗೂ ಗಡಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಐತಿಹಾಸಿಕ ಸ್ಥಳವಾಗಿರುವ ಭುವನಗಿರಿಯ ಭುವನೇಶ್ವರಿ ದೇವಿ ದೇವಾಲಯದಲ್ಲಿ ಎರಡನೇ ಬಾರಿಗೆ ಕನ್ನಡ ಜ್ಯೋತಿ ರಥಕ್ಕೆ ಉದ್ಘಾಟಿಸಲಾಗಿದೆ. ಕನ್ನಡದ ಆಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಕರುನಾಡಿಗೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮಾತೃ ಭಾಷೆ ಬೇರೆಯಾಗಿದ್ದರೂ ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಗಾಧವಾಗಿದೆ ಎಂದರು.
ದ.ರಾ. ಬೇಂದ್ರೆ, ಡಿ.ವಿ ಗುಂಡಪ್ಪ, ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್, ಹೀಗೆ ಹಲವಾರು ಸಾಹಿತಿಗಳು ಮಹಾನಾಯಕರ ಮಾತೃಭಾಷೆ ಬೇರೆಯಾದರು ಅವರ ಕರುನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡಿಗರು ಎಲ್ಲಾ ಭಾಷೆಯನ್ನು ಗೌರವಿಸುವ ಹೃದಯ ವೈಶಾಲತೆಯನ್ನು ಹೊಂದಿದ್ದಾರೆ. ಕರುನಾಡಿನಲ್ಲಿ ಕನ್ನಡ ಭಾಷೆಯೇ ಆಗ್ರಸ್ಥಾನ ಮತ್ತು ಸಾರ್ವಭೌಮ ಎಂದರು.
ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕೃತಿಯ ಸಿಂಧುವಿನಲ್ಲಿ ಸಿದ್ದಾಪುರ ಒಂದು ಬಿಂದುವಾಗಿದ್ದರೂ ಸಹ ಕನ್ನಡ ಅಸ್ಮಿತೆಯನ್ನು ಭಾಷಾ ಭಾಂದವ್ಯ, ಮತಗಳ ಸಾಮರಸ್ಯ, ಸಂಕೃತಿಕ ಕೊಡುಗೆ ಅಪ್ಪಿಕೊಂಡು ಬಂದಿರುವ ಈ ತಾಲೂಕು ಕನ್ನಡಿಗರ ನಿಜ ಸ್ವರೂಪವನ್ನು ಬಿಂಬಿಸುತ್ತದೆ. ಇಲ್ಲಿಂದ ಪ್ರಾರಂಭವಾದ ಕನ್ನಡ ಜ್ಯೋತಿ ರಥಯಾತ್ರೆ ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನ ತಲುಪಲಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕನ್ನಡ ನಾಡಿನ ಜನರು ತಾಳ್ಮೆ, ಸಹನೆ, ಸುಸಂಸ್ಕೃತ ಇರುವಂತವರು. ಕನ್ನಡ ನಾಡಿನ ಮಹಿಮೆ, ಪ್ರೀತಿ ವಿಶ್ವಾಸವನ್ನು ಹೊಂದಿರುವ ಕನ್ನಡಿಗರು ಹೊರ ರಾಜ್ಯದ ಯಾರೇ ಬಂದರೂ ಕನ್ನಡ ಮಾತನಾಡಲು ಕಲಿಯಬೇಕು ಎಂಬ ಹೃದಯ ಶ್ರೀಮಂತಿಕೆ ನಾಡ ಜನರು ಹೊಂದಿದ್ದಾರೆ. ಕನ್ನಡ ನಾಡಿನ ನೆಲ, ಜಲ ಗಡಿ ರಕ್ಷಣೆ ಮಾಡಲು ಎಲ್ಲರೂ ಕಟ್ಟಿಬದ್ಧರಾಗಿರಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯಿಂದ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ಜಿಲ್ಲೆಯಲ್ಲಿ 4 ದಿನಗಳ ಕಾಲ ನಡೆಯುವ ರಥಯಾತ್ರೆ ಯಶಸ್ವಿಗೊಳಿಸಲು ಜಿಲ್ಲಾಡಳಿತದ ವತಿಯಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದ್ದು, ಸಿದ್ದಾಪುರದಿಂದ ಪ್ರಾರಂಭವಾದ ರತಯಾತ್ರೆ ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಕಾಣಕೋಣ(ಗೋವಾ), ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿ ಮೂಲಕ ಹಾವೇರಿ ಜಿಲ್ಲೆಗೆ ಬೀಳ್ಕೊಡಲಾಗುವುದು ಎಂದರು.
ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡ ಕಲಿಯುವ ಹುಮ್ಮಸ್ಸು ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಮಾಡಬೇಕು. ಕನ್ನಡ ಜನತೆಗೆ ಕನ್ನಡದ ಮೇಲಿನ ಗೌರವ ಮತ್ತು ಕನ್ನಡ ಕಲಿಯುವವರಿಗೆ ಕನ್ನಡ ಕಲಿಯಲು ಪ್ರೋತ್ಸಾಹಿಸುವ ಕನ್ನಡಿಗರ ಹೃದಯ ವೈಶಾಲ್ಯತೆಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಸಾಲದು ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯದ ಸಹಾಯಕ ಆಯುಕ್ತ ಶಿವಮೂರ್ತಿ, ಕ.ಸಾ.ಪ. ರಾಜ್ಯ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ, ತಹಶೀಲ್ದಾರ ಎಂ.ಆರ್ ಕುಲಕರ್ಣಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ದೇವರಾಜ ಹಿತ್ಲಾಕೊಪ್ಪ, ರಾಜ್ಯ ಕೋಶ ಅಧ್ಯಕ್ಷ ಬಿ.ಎನ್ ಪಾಟೇಲ್ ಪಾಂಡು, ಭುವನೇಶ್ವರಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ, ಗ್ರಾ,ಪಂ ಅಧ್ಯಕ್ಷ ಉಲ್ಲಾಸ ಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ, ಡಾ.ಶಶಿ ಭೂಷಣ್ ಹೆಗಡೆ, ಕೆ.ಜಿ ನಾಗರಾಜ ವಿವಿಧ ಜಿಲ್ಲಾ ಮತ್ತು ತಾಲೂಕು ಕ.ಸಾ.ಪ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ಮತ್ತಿತರರು ಇದ್ದರು.
ಶಿರಸಿಯ ಸಹಾಯಕ ಆಯುಕ್ತೆ ಕಾವ್ಯರಾಣಿ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು, ಕ.ಸಾ.ಪ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಸ್ವಾಗತಿಸಿದರು, ನಾಟಿಕಟ್ಟಾ ಪ.ಪೂ. ಕಾಲೇಜಿನ ಪ್ರಾಚಾರ್ಯರು ಎಂ.ಕೆ.ನಾಯ್ಕ ನಿರೂಪಿಸಿದರು. ತಾಲೂಕು ಕ.ಸಾ.ಪ. ಅಧ್ಯಕ್ಷ ಗೋಪಾಲ ನಾಯ್ಕ ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q