ವೈ.ಎನ್.ಹೊಸಕೋಟೆ : ಕನ್ನಡದ ಉಳಿವಿಗೆ ಕನ್ನಡವೇ ಪ್ರತಿಯೊಬ್ಬರ ಮನೋಧರ್ಮವಾಗಬೇಕು ಎಂದು ಗಡಿನಾಡು ಚಿಂತಕ ಡಾ.ಹೆಚ್.ಕೆ.ನರಸಿಂಹಮೂರ್ತಿ ತಿಳಿಸಿದರು.
ಕನ್ನಡ ಕಲಾ ಮತ್ತು ಸಾಂಸ್ಕöÈತಿಕ ಮಂಡಲಿಯು ೬೯ನೇ ಕನ್ನಡ ರಾಜ್ಯೋತ್ಸವ ಮತ್ತು ಮಂಡಲಿಯ ೩೮ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ನಮ್ಮೂರ ಕನ್ನಡಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶಾಲವಾಗಿ ಹಬ್ಬಿ ಹರಡಿ ಸಮೃದ್ಧವಾಗಿರುವ ಕನ್ನಡ ಸಂಸ್ಕೃತಿಯು ಮತ್ತಷ್ಟು ಪ್ರಬಲವಾಗಲು, ಕನ್ನಡದ ಹೆಮ್ಮೆಯ ಕುವರರು ಹೇಳುವಂತೆ ಕನ್ನಡಿಗರು ವಿಶ್ವಮಾನವರಾಗಬೇಕು. ಜಾತಿ, ಪಕ್ಷ, ಪಂಥ, ಮತಗಳನ್ನು ಮೀರಿ ಕನ್ನಡವೇ ಮನೋಧರ್ಮವಾಗಬೇಕು. ವಿಶೇಷವಾಗಿ ಗಡಿನಾಡಿನಲ್ಲಿ ಭಾಷಾ ಅಸ್ಮಿತೆಯನ್ನು ಉಳಿಸಿಕೊಂಡು ಉಲುಸಾಗಿ ಬೆಳೆಯಲು ಕನ್ನಡ ಕಲಿಯುವುದು ಜೊತೆಗೆ ಕನ್ನಡ ಉಲಿಯುವುದು ಪ್ರತಿಯೊಬ್ಬರ ಅಂತರಾಳದಲ್ಲಿ ಬೇರೂರಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎನ್.ಆರ್.ಅಶ್ವಥ್ ಕುಮಾರ್ ಮಾತನಾಡಿ, ತೆಲುಗುಮಯವಾಗಿದ್ದ ಈ ಗಡಿಭಾಗದಲ್ಲಿ ಕನ್ನಡ ಕಂಪನ್ನು ಹರಡಿಸಲು ನಿರಂತರ ಕನ್ನಡ ಕಾರ್ಯಕ್ರಮಗಳು ನಡೆಯಬೇಕು. ಸರ್ಕಾರಗಳು ಗಡಿಭಾಗಗಳಿಗೆ ಹೆಚ್ಚು ಒತ್ತು ನೀಡಬೇಕು. ಇಂತಹ ಕಾರ್ಯವನ್ನು ಸ್ಥಳೀಯ ಸಂಘಟನೆ ನಿರಂತರವಾಗಿ ಮಾಡುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿ. ಅದರ ಭಾಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಕನ್ನಡಶ್ರೀ ಪ್ರಶಸ್ತಿ ನೀಡಿ ಕನ್ನಡ ಜ್ಞಾನ ಬೆಳೆಸುತ್ತಿರುವ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರಪ್ಪ, ಈ ಗಡಿಭಾಗದಲ್ಲಿ ಕನ್ನಡ ಉಳಿವಿಗೆ ಬೆಳವಿಗೆ ಸತತ ೩೮ ವರ್ಷಗಳಿಂದ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿ ಶ್ರಮಿಸುತ್ತಿದ್ದು, ಕನ್ನಡ ವಾತಾವರಣ ಸೃಷ್ಟಿಸುವಲ್ಲಿ ಸಫಲವಾಗಿದೆ ಎಂದು ತಿಳಿಸಿದರು.
ಕನ್ನಡಶ್ರೀ ಪ್ರಶಸ್ತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪಿ.ಜಿ.ಕಾವ್ಯ ಮತ್ತು ಧನಲಕ್ಷ್ಮೀ ಕನ್ನಡಶ್ರೀ ೨೦೨೪ ರ ಪ್ರಶಸ್ತಿಯನ್ನು ಪ್ರಥಮ ಸ್ಥಾನ ಪಡೆದ ವಾಸವಿ ವಿದ್ಯಾನಿಕೇತನ ಶಾಲೆಯ ಅಮೋಘವರ್ಷ ಮತ್ತು ದ್ವಿತೀಯ ಸ್ಥಾನ ಪಡೆದ ರಾಷ್ಟ್ರೀಯ ವಿದ್ಯಾಪೀಠ ಶಾಲೆಯ ತನುಜ ಹಾಗೂ ತರಬೇತಿಗೊಳಿಸಿದ ಶಿಕ್ಷಕರಾದ ಅನಿಲ್ ಕುಮಾರ್ ಮತ್ತು ಕೆ.ಎನ್.ಕಾರ್ತೀಕ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜಾನಪದ ಸೊಗಡಿನ ಮನೋರಂಜನ ನೃತ್ಯಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಸಾಧಿಕ್ ಸಾಬ್, ಹೆಚ್.ಕೆ.ಶ್ರೀನಿವಾಸ, ಜೆ.ಮಧುಸೂಧನ, ಶಿಕ್ಷಕ ಹನುಮಂತರಾಯ, ಮಂಡಲಿಯ ಪದಾಧಿಕಾರಿಗಳಾದ ಎ.ಓ.ನಾಗರಾಜು, ಪಿ.ಬಿ.ವಿಶ್ವನಾಥ, ಹೊ.ಮ.ನಾಗರಾಜು, ಪಿ.ಎಂ.ಗಿರೀಶ್, ಕೃಷ್ಣಕುಮಾರ್, ನಾಗಪ್ಪ, ಜಮೀಲ್, ಪ್ರಶಾಂತ್, ಚಿಕ್ಕೋಬಯ್ಯ, ಇರ್ಪಾನ್, ಮಣಿಕಂಠ, ನೂರುದ್ದೀನ್, ಆದಿಲ್, ನಂದೀಶ್ ಇತರರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx