ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ನಡೆಯುವ ಕರಗ ಉತ್ಸವಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡ ಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ನ ಪಿ.ಆರ್. ರಮೇಶ್ ಅವರ ಪ್ರಶ್ನೆ ಕೇಳಿ, ಶ್ರಮ ಸಂಸ್ಕೃತಿಯ ಜನ ಆಚರಿಸುವ ಕರಗ ಉತ್ಸವಕ್ಕೆ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಅನುದಾನ ನೀಡಿತ್ತು.ಈ ಬಾರಿ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಜಾತ್ಯತೀತವಾಗಿ ಎಲ್ಲಾ ಜನ ಕರಗದಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯದಲ್ಲಿ 10ಕ್ಕೂ ಹೆಚ್ಚು ಜಿಲ್ಲಾಗಳಲ್ಲಿ 147 ಕಡೆ ಕರಗ ಉತ್ಸವ ನಡೆಯುತ್ತದೆ. ಅವುಗಳಿಗೆ ತಲಾ 5 ಲಕ್ಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಅವರು, ಕೆಂಗಲ್ ಹನುಮಂತಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರಂಭಿಸಿದರು, ವೀರಪ್ಪ ಮೊಯ್ಲಿ ಕಾಲದಲ್ಲಿ ಸ್ವತಂತ್ರ ನಿರ್ದೇಶನಾಲಯವಾಗಿದೆ. ನಾನು ಆಗ ಆ ಖಾತೆ ನಿರ್ವಹಣೆ ಮಾಡಿದ್ದೆ. ಈಗ ಇಲಾಖೆಯ ಹಣ ಸಂಸ್ಕೃತಿ ರಕ್ಷಣೆ ಬದಲು ಬೇರೆ ಉದ್ದೇಶಗಳಿಗೆ ಖರ್ಚಾಗುತ್ತಿದೆ. ಡೊಳ್ಳು ಹೊಡೆಯುವವರು ಸೇರಿದಂತೆ ಸಂಸ್ಕೃತಿ ಉಳಿಸುವ ಎಲ್ಲರಿಗೂ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಕುಲದ ಕಸುಬನ್ನು ನಂಬಿ ಬದುಕುವ ಸಮುದಾಯವೇ ಸಂಸ್ಕೃತಿ ರಕ್ಷಣೆ ಮಾಡಲಿದೆ. ನಾನು ಹಲಗಿ ಹೊಡೆಯುವ ಸಮುದಾಯದಿಂದ ಬಂದವನನ್ನು, 2008ರಿಂದ 2013ರವರೆಗೂ ಇಲಾಖೆಯ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. 21ನೇ ಶತಮಾನದಲ್ಲಿ ಕಲೆ ನಶಿಸುತ್ತಿದೆ. ನಾನು ಸಚಿವನಾಗಿದ್ದಾಗ ಬೀದರ್ ನಲ್ಲಿ ವಿಶ್ವ ಜಾನಪದ ಮೇಳ ಮಾಡಿದ್ದೆವು. 2011ರಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಮಾಡಿದ್ದೆವು ವಿವರಿಸಿದರು.
ಎಲೆಕ್ಟ್ರಾನಿಕ್ ಮತ್ತು ದೃಶ್ಯ ಮಾಧ್ಯಮದಿಂದ ರಾಜ್ಯದಲ್ಲಿದ್ದ 75 ನಾಟಕ ಕಂಪೆನಿಗಳ ಪೈಕಿ ಬಹುತೇಕ ಮುಚ್ಚಿ ಹೋಗಿವೆ, 25 ಮಾತ್ರ ಉಳಿದಿವೆ. ಅವುಗಳಿಗೆ ಪ್ರತಿ ವರ್ಷ ನಿರ್ವಹಣೆಗಾಗಿ 5 ಲಕ್ಷ ರೂ.ನೀಡಲು ನಾನು ಸಚಿವನಾಗಿದ್ದಾಗ ಆದೇಶಿಸಿದೆ, ಅದು ಈಗಲೂ ಮುಂದುವರೆದಿದೆ. ಗಡಿನಾಡು, ಹೊರನಾಡಿನ ನಾಟಕ ಕಂಪೆನಿಗಳಿಗೂ ಅನುದಾನ ನೀಡಿದ್ದೆ ಎಂದು ಹೇಳಿದರು.
ಕರಗ ನಡೆಸಲು ಬೆಂಗಳೂರು 66 ಲಕ್ಷ ರೂ, ಗ್ರಾಮಾಂತರಕ್ಕೆ 23 ಲಕ್ಷ ರೂ., ನೀಡಲಾಗಿದೆ. ಹಳೆ ಮೈಸೂರು ಭಾಗದಲ್ಲಿ ತುಮೂಕು, ಮೈಸೂರು, ಮಂಡ್ಯ,ರಾಮನಗರ, ಚಾಮರಾಜನಗರ, ಹಾನಸ, ಬೆಂಗಳೂರ ನಗರ ಗ್ರಾಮಾಂತರ ಜಿಲ್ಲಾಗಳಲ್ಲಿ, ಕಿತ್ತೂರು ಕರ್ನಾಟಕದ ಭಾಗದ ಹಾವೇರಿ ಜಿಲ್ಲಾಯಲ್ಲಿ ಕರಗ ಉತ್ಸವ ಆಚರಿಸಲಾಗುತ್ತದೆ. ಆ ಉತ್ಸವದ ಗತ ವೈಭವ ಕಾಪಾಡಿಕೊಳ್ಳಲು ಸರ್ಕಾರದಿಂದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB