ತೀವ್ರ ಭೂ ವಿವಾದಕ್ಕೆ ಗುರಿಯಾಗಿದ್ದ ಡಾ.ಕೆ.ಶಿವರಾಮಕಾರಂತ ಬಡಾವಣೆ ಸಂಬಂಧ ಬರೋಬ್ಬರಿ ೧೪೭೫ ಕಟ್ಟಡಗಳಿಗೆ ಸಕ್ರಮಗೊಳಿಸುವುದಾಗಿ ಬಿಡಿಎ ಸಮಿತಿ ಪ್ರಕಟಿಸಿದ್ದು, ಶೀಘ್ರದಲ್ಲೇ ಸಕ್ರಮ ಪ್ರಮಾಣ ಪತ್ರ ಹಂಚಿಕೆ ಮಾಡಲಿದೆ.ನಗರದಲ್ಲಿಂದು ಬಿಡಿಎ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂತನವಾಗಿ ಅಭಿವೃದ್ಧಿಪಡಿಸುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆ ಕುರಿತು ಸರ್ಕಾರ ನೇಮಿಸಿರುವ ಸಮಿತಿ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುಪ್ರೀಂ ಕೋರ್ಟಿನ ತೀರ್ಪಿನ ಅನ್ವಯ ಡಾ.ಶಿವರಾಂ ಕಾರಂತ ಬಡಾವಣೆಗಳೆಂದು ಅಧಿಸೂಚನೆ ಹೊರಡಿಸಲಾಗಿದ್ದ ೧೭ ಗ್ರಾಮಗಳ ೧೪೭೫ ಕಟ್ಟಡಗಳಿಗೆ ಅನುಮೋದನೆ ನೀಡಿದೆ. ಅದರಂತೆ ಈ ಎಲ್ಲಾ ಕಟ್ಟಡ ಮಾಲೀಕರಿಗೆ ಸಕ್ರಮ ಪ್ರಮಾಣ ಪತ್ರಗಳನ್ನು ನೀಡಲು ಸಮಿತಿ ಉದ್ದೇಶಿಸಿದೆ ಎಂದು ಅವರು ತಿಳಿಸಿದರು.ಇನ್ನೂ, ಡಾ. ಕೆ. ಶಿವರಾಮಕಾರಂತ ಬಡಾವಣೆಗೆ ಗೊತ್ತುಪಡಿಸಿದ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳ ಆಹ್ವಾನಿಸುವ ಪ್ರಕ್ರಿಯೆ ನಡೆಸಲಾಗಿತ್ತು.ಅದರಂತೆ ೭,೧೬೧ ಅರ್ಜಿಗಳು ಬಂದಿವೆ.
ಈ ಪೈಕಿ ೪೨೯ ಅರ್ಜಿಗಳಿಗೆ ದಾಖಲೆ ಇಲ್ಲ. ಹೀಗಾಗಿ, ಗಣನೆಗೆ ತೆಗೆದುಕೊಂಡಿಲ್ಲ ಎಂದು ವಿವರಿಸಿದರು.ಪ್ರಮುಖವಾಗಿ ೧೩ ಬಿಡಿಎ ಅನುಮೋದಿತ ಬಡಾವಣೆಗಳು ಮತ್ತು ನಿರ್ಮಾಣ ಹಂತದಲ್ಲಿ ಇರುವ ಎರಡು ಬಹುಮಹಡಿ ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಬಿಡಿಎಗೆ ಆದೇಶಿಸಿದೆ. ಇದೇ ವೇಳೆ ಎಂಟು ಶಿಕ್ಷಣ ಸಂಸ್ಥೆಗಳನ್ನು ಶೈಕ್ಷಣಿಕ ಚಟುಚಟಿಕೆಗಳಿಗಾಗಿ ಸಕ್ರಮಕ್ಕೆ ಅನುಮೋದಿಸಿದೆ ಎಂದು ತಿಳಿಸಿದರು.ಶಿವರಾಮ ಕಾರಂತ ಬಡಾವಣೆಗೆ ಗೊತ್ತುಪಡಿಸಿರುವ ಪ್ರದೇಶಗಳಲ್ಲಿ ೨೦೧೮ರ ಆ.೩ಕ್ಕೆ ಮುಂಚಿತವಾಗಿ ನಿರ್ಮಿಸಲಾದ ಕಟ್ಟಡ ಮತ್ತು ಮನೆಗಳ ನಿರ್ಮಾಣ ಎಂದು ವರ್ಗೀಕರಣ ಮಾಡುವ ಕಾರ್ಯವನ್ನು ಜೆಸಿಸಿ ಮುಂದುವರೆಸಿದೆ.
ಇನ್ನೂ, ಆವಲಹಳ್ಳಿಯಲ್ಲಿ ಬಿಎಂಎಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ೨೫ ಗುಂಟೆ, ಹಾರೋಹಳ್ಳಿ ಗ್ರಾಮದಲ್ಲಿ ೩೪ ಗುಂಟೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲಾಗಿದೆ ಎಂದರು.೧೫೦ ಎಕರೆ ಭೂಮಿ: ಇದರ ನಡುವೆ ಸುಪ್ರೀಮ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಡಾ.ಶಿವರಾಂ ಕಾರಂತ ಬಡಾವಣೆಯಲ್ಲಿ ಆರು ಪ್ರತ್ಯೇಕ ಬ್ಲಾಕ್ ಗಳಲ್ಲಿ ತಲಾ ೨೫ ಎಕರೆಯಂತೆ ಒಟ್ಟು ೧೫೦ ಎಕರೆ ಭೂಮಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರು ಮಾಡುವಂತೆ ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದೆ.ಈ ಜಾಗಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮವು ಆರ್ಥಿಕವಾಗಿ ಹಿಂದುಳಿದವರಿಗೆ ಸೂರು ಕಲ್ಪಿಸುವ ಯೋಜನೆ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಎ.ವಿ.ಚಂದ್ರಶೇಖರ್ ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಜಯ್ಕರ್ ಜಯರಾಂ, ಎಸ್.ಟಿ.ರಮೇಶ್ ಸೇರಿದಂತೆ ಪ್ರಮುಖರಿದ್ದರು.
ಕೋಡಿಹಳ್ಳಿ ವಿರುದ್ಧ ಕಿಡಿ..!
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂತನವಾಗಿ ಅಭಿವೃದ್ಧಿಪಡಿಸುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆ ಕುರಿತು ಸರ್ಕಾರ ನೇಮಿಸಿರುವ ಸಮಿತಿ ಕಾರ್ಯಾಚರಣೆ ಕೈಗೊಂಡಾಗ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕೆಲ ಜನರನ್ನು ಹುಚ್ಚೆಬ್ಬಿಸಿದರು. ಆದರೆ, ಇದೀಗ ಸತ್ಯ ಜನರಿಗೆ ಗೊತ್ತಾಗಿದೆ.ಅವರೇ ನಮ್ಮನ್ನು ಶ್ಲಾಘಿಸುತ್ತಿದ್ದಾರೆ ಎಂದು ಎ.ವಿ.ಚಂದ್ರಶೇಖರ್ ಹೇಳಿದರು.
ವರದಿ ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


