ಬೆಳಗಾವಿ: ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುಂದುವರೆಸುವುದು ಭಾಜಪ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿ ಜಿಲ್ಲೆಯ ನಂದಗಢದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ರಥ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ 53 ಲಕ್ಷ ರೈತ ಕುಟುಂಬಗಳಿಗೆ 12 ಸಾವಿರ ಕೋಟಿ ಕಿಸಾನ್ ಸಮ್ಮಾನ ಯೋಜನೆ ತಲುಪಿದೆ. 4481 ಕೋಟಿ ರೂ. ರಾಜ್ಯ ಸರ್ಕಾರದಿಂದ ಪಾವತಿಯಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ. ರಾಜ್ಯ ಸರ್ಕಾರ ರೈತ ಮಕ್ಕಳಿಗೆ, ರೈತ ಕೂಲಿಕಾರರ, ನೇಕಾರರು, ಮೀನುಗಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ದುಡಿಯುವ ವರ್ಗದ ಕುಶಲಕರ್ಮಿಗಳ ಆರ್ಥಿಕ ಅಭಿವೃದ್ಧಿಗೆ ಕಾಯಕ ಯೋಜನೆ, ಮಹಿಳೆಯರ ಸ್ವಯಂಉದ್ಯೋಗಕ್ಕೆ ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆ ಜಾರಿಗೊಳಿಸಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ಯೋಜನೆ, ದುಡಿಯುವ ಮಹಿಳೆಗೆ ಮಾಸಿಕ 1000 ರೂ. ಯೋಜನೆ, ಗಳನ್ನು ರೂಪಿಸಲಾಗಿದೆ. ಸುಮಾರು 30 ಲಕ್ಷ ಮಹಿಳೆಯರಿಗೆ ಈ ಯೋಜನೆಗಳಿಂದ ಲಾಭ ದೊರೆಯಲಿದೆ ಎಂದರು.
ಬೆಳಗಾವಿಯಲ್ಲಿ 12 ಸಾವಿರ ಮರಾಠ ಮಕ್ಕಳಿಗೆ ವಿದ್ಯಾರ್ಥಿ ವೇತನ :
ಕೋವಿಡ್ ನಂತರವೂ ಕರ್ನಾಟಕದ ತಲಾವಾರು ಆದಾಯ 3.54 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಕೋವಿಡ್ ನಂತರ ಸವಾಲುಗಳ ನಡುವೆಯೂ ರಾಜ್ಯದ ಆರ್ಥಿಕತೆಯನ್ನು ಮೇಲೆತ್ತಲಾಗಿದೆ. ಮರಾಠ ನಿಗಮಕ್ಕೆ 100 ಕೋಟಿ ಅನುದಾನ ನೀಡಿ, ಮರಾಠ ಜನರ ಶಿಕ್ಷಣ, ಗಂಗಾಕಲ್ಯಾಣ ಉದ್ಯೋಗಕ್ಕೆ ಬಲ ನೀಡಲಾಗುತ್ತಿದೆ. ಬೆಳಗಾವಿಯಲ್ಲಿ 12 ಸಾವಿರ ಮರಾಠ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಗಾಣಿಗರ, ಮಾದಾರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗುತ್ತಿದೆ. ಎಲ್ಲ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಕಮಲ ಸಂಪೂರ್ಣವಾಗಿ ಅರಳಲಿದೆ ಎಂಬ ವಿಶ್ವಾಸವಿದೆ. ಭಾಜಪದ ಸಂಕಲ್ಪಕ್ಕೆ ಜನರ ಆಶೀರ್ವಾದ ಬೇಕು ಎಂದರು.
ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಸಿಡಿದೆದ್ದು ಅವರನ್ನು ಹಿಮ್ಮೆಟಿಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮನೆಮನೆಗೂ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಸಂಗೊಳ್ಳಿ ರಾಯಣ್ನನವರ ಶಕ್ತಿ ಅಭೂತಪೂರ್ವವಾದದ್ದು. ದೇಶಕ್ಕಾಗಿ ಹೋರಾಡುವ ಅದೇ ಗುಣಧರ್ಮವನ್ನು ಪ್ರಧಾನಿ ಮೋದಿಯವರು ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಸಚಿವರಾದ ಗೋವಿಂದ ಕಾತಜೋಳ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಸಿ.ಸಿ ಪಾಟೀಲ್, ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


