ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ಜಾತಿ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡುವ ಜತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಸಮಾಜಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು 3 ಗಂಟೆಗಳ ಕಾಲ ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಬಳಿಕ ಅಧಿಕಾರಿ ವರ್ಗಕ್ಕೆ ಈ ಸೂಚನೆ ನೀಡಿದರು.
ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯ ಆಗುವುದಿಲ್ಲ ಎನ್ನುವ ಕಾರಣದಿಂದ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ, ನಾಗರಿಕ ಹಕ್ಕು ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸರ್ಕಾರ ಈ ಕಾಯ್ದೆಗೆ ಹೆಚ್ಚಿನ ಮಹತ್ವ ನೀಡಿ ಗಂಭೀರವಾಗಿ ಪರಿಗಣಿಸುತ್ತದೆ. ಸಂತ್ರಸ್ತರಿಗೆ ರಕ್ಷಣೆ ಸಿಗಬೇಕು.
ಈ ಉದ್ದೇಶ ಸಫಲವಾಗಲು ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಪ್ರಾಸಿಕ್ಯೂಷನ್ ಇಲಾಖೆ, ಕಂದಾಯ ಇಲಾಖೆ ಸಮನ್ವಯದೊಂದಿಗೆ ಕೆಲಸ ಮಾಡಬೇಕು. ಸಮನ್ವಯ ಇದ್ದಾಗ ಮಾತ್ರ ವ್ಯವಸ್ಥಿತವಾಗಿ ಈ ವರ್ಗದ ಜನರಿಗೆ ನ್ಯಾಯ ಸಿಗಲು ಸಾಧ್ಯವಾಗುತ್ತದೆ ಎಂದರು.
ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಎರಡು ತಿಂಗಳೊಳಗೆ ಚಾರ್ಜ್ ಶೀಟ್ ಹಾಕುವ ಬಗ್ಗೆ ಎಸ್.ಪಿ. ಗಳಿಗೆ, ಡಿಸಿಪಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪೊಲೀಸರು ಜಾಗರೂಕತೆಯಿಂದ ತನಿಖೆ ಮಾಡಬೇಕು. ಇವುಗಳನ್ನು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಶಿಕ್ಷೆ ಕೊಡಿಸಲು ಎಲ್ಲ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.


