ಬೆಳಗಾವಿಯಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯಗಳು ದಿನೇದಿನೇ ಹೆಚ್ಚಾಗುತ್ತಿವೆ. ತಾಯ್ನೆಲಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಲಾಗಿದೆ, ಇಡೀ ಮನುಕುಲಕ್ಕೆ ಕಾಯಕ ಧರ್ಮವನ್ನು ನೀಡಿದ ಮಹಾಮಾನವತಾವಾದಿ ಬಸವಣ್ಣನವರ ಭಾವಚಿತ್ರಕ್ಕೆ ಸೆಗಣಿ ಬಳಿಯಲಾಗಿದೆ. ಬೆಳಗಾವಿ ಮತ್ತು ಮಹಾರಾಷ್ಟ್ರಗಳಲ್ಲಿ ಕನ್ನಡಿಗರ ಆತ್ಮಾಭಿಮಾನದ ಪ್ರತೀಕವಾಗಿರುವ ಕನ್ನಡ ಧ್ಚಜಕ್ಕೆ ಬೆಂಕಿ ಇಡಲಾಗಿದೆ. ಇದಕ್ಕೆಲ್ಲ ಕಾರಣಕರ್ತರು ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆಗಳ ಗೂಂಡಾಗಳು. ಈ ಕಾರಣಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಈ ಎರಡೂ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಸತತ ಹೋರಾಟ ನಡೆಸುತ್ತಿದೆ ಎಂದು ಟಿ.ಎ.ನಾರಾಯಣಗೌಡ ಅವರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದ್ದು, ಈ ಸಂಬಂಧ ಹಲವು ನಿರ್ಣಯಗಳನ್ನು ಸಂಘಟನೆ ಕೈಗೊಂಡಿದೆ.
ಕಳೆದ ಡಿಸೆಂಬರ್ 20ರಂದು ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಸುಮಾರು ಐದು ಸಾವಿರಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದರು. ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಒಂದಲ್ಲ ಒಂದು ಬಗೆಯ ಚಳವಳಿಯನ್ನು ಹಮ್ಮಿಕೊಂಡು ಎಂಇಎಸ್ ಮತ್ತು ಶಿವಸೇನೆ ನಿಷೇಧಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಚಳವಳಿಯ ಮುಂದುವರೆದ ಭಾಗವಾಗಿ ಮುಂದಿನ ಹಂತದ ಹೋರಾಟ ರೂಪಿಸುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಇಂದು 23ರಂದು ಮಧ್ಯಾಹ್ನ ಬೆಂಗಳೂರಿನ ಗಾಂಧಿನಗರದಲ್ಲಿ ಕರೆಯಲಾಗಿತ್ತು. ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಈ ಕೆಳಕಂಡಂತಿವೆ.
ಎಂಇಎಸ್ ಮತ್ತು ಶಿವಸೇನೆ ನಿಷೇಧಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು 24ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕರವೇ ಜಿಲ್ಲಾ ಘಟಕಗಳು ಸಾವಿರಾರು ಸಂಖ್ಯೆಯಲ್ಲಿ ಏಕಕಾಲಕ್ಕೆ `ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ’ ನಡೆಸಲಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಮ್ಮ ಆಗ್ರಹ ಪತ್ರಗಳನ್ನು ಸಲ್ಲಿಸಲಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ದಿನಾಂಕ ಡಿ.30ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣದಿಂದ ರಾಜಭವನದವರೆಗೆ ಬೃಹತ್ ಮೆರವಣಿಗೆ ನಡೆಸಿ, ರಾಜಭವನ ಮುತ್ತಿಗೆ ಹಾಕಲು ನಿರ್ಧರಿಸಲಾಯಿತು. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗಾವಿ ಮತ್ತು ಮಹಾರಾಷ್ಟ್ರಗಳಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಕನ್ನಡದ ಆರಾಧ್ಯ ಮಹಾನಾಯಕರಿಗೆ ಅಪಮಾನವೆಸಗುತ್ತಿರುವ ಕುರಿತು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಗಮನ ಸೆಳೆದು, ಎಂಇಎಸ್ ಮತ್ತು ಶಿವಸೇನೆ ನಿಷೇಧಕ್ಕಾಗಿ ಕ್ರಮಕೈಗೊಳ್ಳಲು ಮಾನ್ಯ ರಾಜ್ಯಪಾಲರನ್ನು ಒತ್ತಾಯಿಸಲಾಗುವುದು.
ಡಿಸೆಂಬರ್ 31ರಂದು ಕೆಲವು ಸಂಘಟನೆಗಳು `ಕರ್ನಾಟಕ ಬಂದ್’ ಕರೆ ನೀಡಿವೆ. ಈ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವಿರುವುದಿಲ್ಲ. ಬಂದ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಾಲ್ಗೊಳ್ಳುವುದಿಲ್ಲ. ಬಂದ್ ನಿಂದಾಗಿ ಜನಸಾಮಾನ್ಯರಿಗೆ ಸಮಸ್ಯೆಗಳಾಗುವುದರಿಂದ ಹಾಗೂ ಬಂದ್ ಒಂದೇ ಚಳವಳಿಯ ಮಾರ್ಗವಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ನಿಲುವು ತಳೆದಿರುವುದರಿಂದ `ಕರ್ನಾಟಕ ಬಂದ್’ ನಿಂದ ದೂರ ಉಳಿಯಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿ, ಕನ್ನಡಿಗರ ಆಸ್ತಿಪಾಸ್ತಿ ನಷ್ಟಗೊಳಿಸಿ, ಕನ್ನಡ ಬಾವುಟ ಸುಟ್ಟ ದುಷ್ಕರ್ಮಿಗಳ ವಿರುದ್ಧ ಅಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮಿಗಿಲಾಗಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸಿದ ಗೂಂಡಾಗಿರಿಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಯೊಂದಕ್ಕೆ ಅಪಮಾನ ಮಾಡಲಾಗಿದೆ ಎಂಬ ಕಾರಣಕ್ಕಾಗಿ, ಈ ಘಟನೆಗೆ ಸಂಬಂಧವೇ ಇಲ್ಲದ, ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಕೆಲವು ಕನ್ನಡ ಸಂಘಟನೆಗಳ ಯುವಕರನ್ನು ಬಂಧಿಸಿ, ಅವರ ವಿರುದ್ಧ ರಾಜ್ಯ ಸರ್ಕಾರ ಅತಿರೇಕದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಂಧಿತ ಯುವಕರ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸಿ, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ.
ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಕಳೆದ ಎರಡು ದಶಕಗಳಿಂದಲೂ ಕರ್ನಾಟಕ ರಕ್ಷಣಾ ವೇದಿಕೆ ಹೋರಾಡುತ್ತಲೇ ಬಂದಿದ್ದು, ಬೆಳಗಾವಿಯಲ್ಲಿ ಅವರ ಪುಂಡಾಟಿಕೆಗೆ ಕಡಿವಾಣ ಹಾಕಲು ಯಶಸ್ವಿಯಾಗಿದೆ. ಈ ಎರಡೂ ಸಂಘಟನೆಗಳು ಸಂಪೂರ್ಣ ರಾಜ್ಯದಿಂದ ತೊಲಗುವವರೆಗೆ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಚಳವಳಿಗಳನ್ನು ಸಂಘಟಿಸಲಿದೆ.
ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ವಿರೂಪಗೊಳಿಸಿದ ಸಮಾಜಘಾತಕ ಶಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಗೂಂಡಾಕಾಯ್ದೆ ಹಾಕಿರುವುದು ಸರಿಯಾಗಿದೆ, ಅದೇ ರೀತಿ ಪೊಲೀಸ್ ವಾಹನಗಳನ್ನು ಸುಟ್ಟು, ಕನ್ನಡಿಗರ ಮನೆಗಳ ಮೇಲೆ ಕಲ್ಲುಹೊಡೆದು ಗೂಂಡಾಗಿರಿ ನಡೆಸಿದವರ ಮೇಲೆ ಹಾಗು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಅಪಮಾನವೆಸಗಿದವರ ಮೇಲೂ ಗೂಂಡಾಕಾಯ್ದೆ ಹೇರಿ, ಎಲ್ಲರನ್ನೂ ಮಹಾರಾಷ್ಟ್ರಕ್ಕೆ ಗಡೀಪಾರು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ.
ಬೆಳಗಾವಿಯ ಸುವರ್ಣ ಸೌಧದ ಮುಂಭಾಗ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸುತ್ತದೆ ಮತ್ತು ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತದೆ. ಅದೇ ರೀತಿ ಜಗತ್ತಿನಲ್ಲಿಯೇ ಮೊದಲ ಬಾರಿ ಮಹಿಳೆಯರ ಸೈನ್ಯವನ್ನು ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮನವರ ಪ್ರತಿಮೆಯನ್ನೂ ಸ್ಥಾಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ ಎಂದು ಟಿ.ಎ.ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy