- ಕನ್ನಡಿಗರು ಕಾನೂನನ್ನು ರೂಪಿಸಿ ನೀತಿ ಯೋಜನೆ ಜಾರಿಗೆ ತರಬೇಕು : ಚೇತನ್ ಅಹಿಂಸಾ
ನೆಲಮಂಗಲ : ಪಟ್ಟಣದ ಶ್ರೀ ಪವಾಡ ಬಸವಣ್ಣ ದೇವರ ಮಠದ ಆವರಣದಲ್ಲಿ ಕರ್ನಾಟಕ ರಣಧೀರರ ವೇದಿಕೆಯ 6ನೇ ವರ್ಷದ ವೈಭವ ಕನ್ನಡ ರಾಜ್ಯೋತ್ಸವ ಹಾಗೂ ತಾಯಿ ಭುವನೇಶ್ವರಿಯ ಹಬ್ಬ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ 2025 ರ ಹೊಯ್ಸಳ ವಿಶಿಷ್ಟ ಸೇವಾ ಪ್ರಶಸ್ತಿ ಸಮಾರಂಭವು ನಡೆಯಿತು.
ತಾಯಿ ಭುವನೇಶ್ವರಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಪಟ್ಟಣದ ರಾಜ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ಶ್ರೀ ಪವಾಡ ಬಸವಣ್ಣ ದೇವರ ಮಠದ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಅದ್ದೂರಿ ಕಾರ್ಯಕ್ರಮವನ್ನು ಶ್ರೀ ಪವಾಡ ಬಸವಣ್ಣ ದೇವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಜಿ, ಕುಂಚಿಟಿಗರ ಮಹಾಸಂಸ್ಥಾನ ಎಲೆರಾಂಪುರ ಮಠದ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ, ವನಕಲ್ಲು ಮಹಾಸಂಸ್ಥಾನ ಮಠದ ಶ್ರೀ ಶ್ರೀ ಬಸವ ರಮಾನಂದ ಸ್ವಾಮೀಜಿಗಳು ದೀಪ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್. ಶ್ರೀನಿವಾಸ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿಶೇಷ ಕರ್ತವ್ಯಾಧಿಕಾರಿಗಳಾದ ಡಾ.ಕೆ.ನಾಗಣ್ಣ, ಖ್ಯಾತ ಚಲನಚಿತ್ರ ನಟ ಹಾಗೂ ಪ್ರಗತಿಪರ ಚಿಂತಕರಾದ ಚೇತನ್ ಅಹಿಂಸಾ ಮತ್ತು ತುಮಕೂರು ಉಪ ವಿಭಾಗಾಧಿಕಾರಿ ಹಾಗೂ ತುಮಕೂರು ವಿಶ್ವ ವಿದ್ಯಾನಿಲಯದ ಕುಲಸಚಿವರಾದ ನಾಹೀದ ಜಮ್ ಜಮ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು, ಸಂಘಟನೆಯ ತತ್ವ ಸಿದ್ಧಾಂತ ಮತ್ತು ಸಂವಿಧಾನದ ಬಗ್ಗೆ, ಕಳೆದ ಐದು ವರ್ಷಗಳಿಂದ ಸಂಘಟನೆ ಯಾವೆಲ್ಲಾ ರೀತಿಯಲ್ಲಿ ಹೋರಾಟಗಳನ್ನು ಮಾಡಿ ಯಶಸ್ವಿಯಾಗಿದೆ ಎಂಬುದನ್ನು ಜೊತೆಗೆ ಮುಂದಿನ ಜನಪರ ಹೋರಾಟಗಳು ನಾಡು ನುಡಿ ನೆಲ ಜಲ ಭಾಷೆಯ ಹೋರಾಟದ ಬಗ್ಗೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಟ ಚೇತನ್ ಅಹಿಂಸಾ, ಕನ್ನಡಿಗರ ಶತ್ರು ಯಾರು..? ಜಾತಿ ಧರ್ಮ ಭಾಷೆ ನಮ್ಮ ಶತ್ರುವಲ್ಲ, ನಮ್ಮ ಶತ್ರು ಅಸಮಾನತೆ ಮತ್ತು ಅನ್ಯಾಯದ ವ್ಯವಸ್ಥೆ. ಈ ಅನ್ಯಾಯದ ವ್ಯವಸ್ಥೆಯ ವಿರುದ್ಧ ಕನ್ನಡಿಗರು ಸಮ ಸಮಾಜವನ್ನು ಕಟ್ಟಬೇಕಿದೆ. ಆಗ ಮಾತ್ರ ನಮ್ಮ ರಾಜ್ಯ ಆದರ್ಶ ಕರ್ನಾಟಕವಾಗಲಿದೆ. ಭಾಷೆ, ಶಿಕ್ಷಣ, ಆರೋಗ್ಯ, ಕ್ರೀಡೆಯಲ್ಲಿ ಸಮಾನತೆಯನ್ನು ಕಾಣಬೇಕು. ಆದರ್ಶ ಸಮಾಜ ನ್ಯಾಯಯುತವಾಗಿ ಕಟ್ಟಿದರೆ ಮಾತ್ರ ನಮ್ಮ ರಾಜ್ಯ ಸುಭಿಕ್ಷವಾಗಿರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷರುಗಳಾದ ಅಶ್ವತ್ ಟಿ. ಮರೀಗೌಡ್ರು, ಕನ್ನಡ ಕನ್ನಡ ಚಳುವಳಿ ಗುರುದೇವ್ ನಾರಾಯಣ್ ಕುಮಾರ್, ಸಾರಿಕ ಶೋಭಾ ವಿನಾಯಕ, ಜ್ಯೋತಿ ಕನ್ನಡತಿ, ಮೋಹನ್ ಗೌಡ, ಪ್ರಸನ್ನ ಗೌಡ, ವಸಂತ್ ಪೂಜಾರಿ, ಕರ್ನಾಟಕ ರಣಧೀರರ ವೇದಿಕೆಯ ನೆಲಮಂಗಲ ತಾಲ್ಲೂಕು ಅಧ್ಯಕ್ಷರಾದ ಮೂರ್ತಿ, ಕೊರಟಗೆರೆ ಘಟಕದ ಮಂಜುಸ್ವಾಮಿ ಎಂ ಎನ್ ಸೇರಿದಂತೆ ಇತರರು ಹಾಜರಿದ್ದರು.
ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಬಸವ ರಮಾನಂದ ಮಹಾ ಸ್ವಾಮಿಜಿಗಳಿಗೆ “ಬಸವ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ
ಸಮಾಜ ಸೇವಕರಾದ ಹುಲ್ಲೂರು ಮಂಜುನಾಥ್ ಹೊಸಕೋಟೆ, ಪಬ್ಲಿಕ್ ಟಿವಿಯ ಖ್ಯಾತ ನಿರೂಪಕರಾದ ಅರುಣ್ ಸಿ. ಬಡಿಗೇರ್, ಮತ್ತು ಚಲನಚಿತ್ರ ಬಾಲನಟಿ ಹಾಗೂ ಭರತನಾಟ್ಯ ಕಲಾವಿದೆಯಾದ ಕುಮಾರಿ ಭೈರವಿಗೆ ಕರ್ನಾಟಕ ರಣಧೀರರ ವೇದಿಕೆಯ 2025ರ “ಹೊಯ್ಸಳ ವಿಶಿಷ್ಟ ಸೇವಾ ಪುರಸ್ಕಾರ” ನೀಡಿ ಗೌರವಿಸಲಾಯಿತು. ಜೊತೆಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸೂರಜ್, ತಿಮ್ಮಪ್ಪ ಗೌಡ (ಚಿನ್ನು), ದೇವರಾಜ್, ಮಂಜುಸ್ವಾಮಿ ಎಂ.ಎನ್., ಲೋಕೇಶ್, ಸಮೀರ್, ರವಿ, ಮುತ್ತುರಾಜ್, ಭೈರವ,ಮಹೇಶ್, ಲೋಕೇಶ್, ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


