ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ,ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದೆ, ಯಾವಾಗಲೂ ತಮಿಳುನಾಡಿಗೆ ನೀರು ಬಿಡಿ ಅಂತ ಹೇಳುತ್ತಿದೆ, ಪ್ರಾಧಿಕಾರ ನಮ್ಮ ಅಫೀಲ್ ಕೇಳ್ತಾನೆ ಇಲ್ಲ ಪ್ರಾಧಿಕಾರ ನಮ್ಮ ಪರ ಇಲ್ಲ ಅಂತ ನನಗೆ ಅನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲಿಂದಲೂ ಸಹ ಪ್ರಾಧಿಕಾರ ನಮ್ಮ ಪರ ನಿಂತಿಲ್ಲ, ಇದನ್ನೆಲ್ಲ ನೋಡಿದರೆ ಕರ್ನಾಟಕದ ಮೇಲೆ ಪ್ರಾಧಿಕಾರ ದ್ವೇಷ ಸಾಧಿಸುತ್ತಿದೆ ಎನಿಸುತ್ತದೆ, ನಮಗೆ ನೀರಿಲ್ಲ ಇನ್ನೂ ತಮಿಳುನಾಡಿಗೆ ಎಲ್ಲಿಂದ ನೀರು ಬಿಡುವುದು, ಸಿಎಂ ಕೂಡ ಅದನ್ನೇ ಹೇಳಿದ್ದಾರೆ.ನಮ್ಮ ರೈತರನ್ನ ಬಲಿ ಕೊಡಲ್ಲ ಅಂತ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.
ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅವರ ಅನಿಸಿಕೆ ಹೇಳಿದ್ದಾರೆ.
ನನಗೇನು ಗೊತ್ತಿಲ್ಲ, ಹೈ ಕಮಾಂಡ್ ಇದೆ ತೀರ್ಮಾನ ಮಾಡುತ್ತೆ, ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲಾ ಎಂದು ಹೇಳಿದರು.
ಮಾದಪ್ಪನಿಗೆ ವಿಶೇಷ ಪೂಜೆ:
ಪ್ರಸಿದ್ಧ ಯಾತ್ರಸ್ಥಳವಾದ ಮಲೆ ಮಹದೇಶ್ವರನಿಗೆ ಸಚಿವ ಕೆ.ವೆಂಕಟೇಶ್ ವಿಶೇಷ ಪೂಜೆ ಸಲ್ಲಿಸಿದರು.ಇವತ್ತು ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದದ್ದು,
ರಾಜ್ಯದ ಜನರಿಗೆ ಶುಭವಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದಲ್ಲಿ ಬರಗಾಲ ಕಳೆದು, ಉತ್ತಮ ಮಳೆಯಾಗಬೇಕು.ಆ ಮೂಲಕ ಕಾವೇರಿ ಸಂಕಷ್ಟ ಸಹ ಬಗೆಹರಿಯಲಿ ಎಂದು ಮಾದಪ್ಪನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ, ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಕಾಡೊಳಗಿನ ಗ್ರಾಮಗಳಿಗೆ ವಾಹನ ಸೌಕರ್ಯ ಕಲ್ಪಿಸುವ ಜನವನ ಸಾರಿಗೆಗೆ ಸಚಿವ ವೆಂಕಟೇಶ್ ಚಾಲನೆ ನೀಡಿದರು.


