ಹಲವು ದಶಕಗಳ ಕಾಲ ಕೆಂಗೇರಿ ಸುತ್ತಮುತ್ತ ನಾಗರಿಕರಿಗೆ ಜೀವಜಲವಾಗಿದ್ದ ಹೊಸಕೆರೆಯು ಈಗ ಒಳಚರಂಡಿ ನೀರು, ಹೂಳು, ಜೊಂಡು ಹಾಗೂ ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಂಡಿದೆ.
ಸುಮಾರು ಒಂದು ಕಿಲೋ ಮೀಟರಿಗೂ ಹೆಚ್ಚು ಉದ್ದನೆಯ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆಂಗೇರಿ ಹೊಸಕೆರೆ, ನಿರ್ವಹಣೆ ಕೊರತೆಯಿಂದ ಅವಸಾನದತ್ತ ತಲುಪಿದೆ. ಕೆರೆಯ ಒಡಲು ಹೂಳಿನಿಂದ ಆವೃತವಾಗಿದೆ. ಕೆರೆ ತುಂಬೆಲ್ಲಾ ಜೊಂಡು ಬೆಳೆದು ನಿಂತಿದೆ. ಸಂಗ್ರಹ ಸಾಮರ್ಥ್ಯ ಕುಂಠಿತಗೊಂಡು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ನೀರು ಕೂಡ ಪೋಲಾಗುತ್ತಿದೆ. ಇದರೊಂದಿಗೆ ಒಳಚರಂಡಿ ನೀರು ಸಹ ಕೆರೆಯ ಒಡಲು ಸೇರುತ್ತಿದೆ. ಕೆರೆಯ ನೀರಿನಲ್ಲಿ ನೊರೆ ಕಂಡು ಬರುತ್ತಿದ್ದು, ಇದು ಸುತ್ತಮುತ್ತ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಕೆರೆ ಅಭಿವೃದ್ಧಿಗೆ ಈಗಾಗಲೇ ಎರಡು ಬಾರಿ ಅನುದಾನ ಬಿಡುಗಡೆಯಾಗಿದೆ.
ಕೆಲ ವರ್ಷಗಳ ಹಿಂದೆ 13 ಕೋಟಿ ವೆಚ್ಚದಲ್ಲಿ ಕೆರೆಗೆ ಕಾಯಕಲ್ಪ ನೀಡಲಾಗಿತ್ತಾದರೂ ಯಾವುದೇ ಸುಧಾರಣೆಯಾಗಿರಲಿಲ್ಲ. ಕಳೆದ ಮಾರ್ಚ್ ತಿಂಗಳಲ್ಲಿ ಕೆ 8.8 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಿಧಾನಗತಿಯ ಕಾಮಗಾರಿಯಿಂದ ಕೆರೆ ಪುನಶ್ವೇತನ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಆರೋಪ-ಪ್ರತ್ಯಾರೋಪ: ಕೆರೆಯಲ್ಲಿ ಕಂಡು ಬರುತ್ತಿರುವ ನೊರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ಗೀತಾ, ‘ಜಲಮಂಡಳಿ ನಿರ್ಲಕ್ಷದಿಂದ ಕೊಳಚೆ ನೀರು ಕೆರೆಗೆ ಸೇರಿ, ಇಂತಹ ಅವಘಡಗಳು ಸಂಭವಿಸುತ್ತಿದೆ’ ಎಂದು ದೂರಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


