ಮಳೆಯಿಂದಾಗಿ ಬೆಂಗಳೂರು ಈಜುಕೊಳ ದಂತಾಗಿರುವುದನ್ನು ಜನರು ಪ್ರಶ್ನಿಸುತ್ತಿದ್ದಾರೆ. ಕೆರೆಗಳನ್ನೇ ನುಂಗಿ ಬಡಾವಣೆಗಳನ್ನು ನಿರ್ಮಿಸಿದ್ದರ ಪರಿಣಾಮವಿದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಯಶವಂತಪುರ ಮೆಟ್ರೋ ನಿಲ್ದಾಣದ ಬಳಿಯ ಅರವಿಂದ್ ಮೋಟಾರ್ಸ್‍ನಿಂದ ಪಂಚರತ್ನ ಕಾರ್ಯಕ್ರಮಕ್ಕಾಗಿ ಖರೀದಿಸಿದ 123 ಎಲ್‍ಇಡಿ ವಾಹನಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿ ಏಳು ಜನ ಸಚಿವರಿದ್ದರೂ ಮಳೆ ಬಂದಾಗ ನೀರು ನುಗ್ಗಿ ಅವಾಂತರ ಉಂಟುಮಾಡುವ ಪರಿಸ್ಥಿತಿ ತಪ್ಪಿಸದೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
2006-07ರಲ್ಲಿ ಪುಟ್ಟೇನಹಳ್ಳಿ ನಿವಾಸಿಗಳ ಅನುಕೂಲಕ್ಕಾಗಿ ತಾವು ಕೈಗೊಂಡ ನಿರ್ಧಾರದಿಂದ ಅಲ್ಲಿನ ನಿವಾಸಿಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ, ಚುನಾವಣೆಯಲ್ಲಿ ನಮಗೆ 100 ವೋಟು, ಬಿಜೆಪಿಗೆ 600 ವೋಟು ಕೊಟ್ಟಿದ್ದಾರೆ ಎಂದರು. ಜನತಾ ಜಲಧಾರೆಯಿಂದ ಕಾಂಗ್ರೆಸ್-ಬಿಜೆಪಿಗೆ ನಡುಕ ಉಂಟಾಗಿದೆ. ನಮ್ಮ ಪಂಚರತ್ನ ಯೋಜನೆ ಬಗ್ಗೆ ಟೀಕೆ ಮಾಡಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲವೇ ಎಂದು ಕಿಡಿಕಾರಿದರು.ಹುಡುಗಾಟಿಕೆಗಾಗಿ ಪಂಚರತ್ನ ಯೋಜನೆ ಹಮ್ಮಿ ಕೊಂಡಿಲ್ಲ. ಈಗಾಗಲೇ ಸಮಾವೇಶದ ಮೂಲಕ ನಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದೇವೆ.
123 ಅಭ್ಯರ್ಥಿಗಳಿಲ್ಲ ಎಂದು ಲಘುವಾಗಿ ಆರೋಪಿಸಿದ್ದಾರೆ. ಆದರೆ, ನಮ್ಮ ಮನೆ ಬಾಗಿಲಿಗೆ ಏಕೆ ಬಂದಿದ್ದರು. ಸರ್ಕಾರ ತರಲು ಏನೇನು ಅಕ್ರಮ ಮಾರ್ಗ ಹಿಡಿದರು ಎಂಬುದು ಗೊತ್ತಿದೆ.ಮುಖ್ಯ ಮಂತ್ರಿ ರಾಜರಾಜೇಶ್ವರಿ ನಗರದ ಪ್ರದಕ್ಷಿಣೆಗೆ ಹೋಗಿದ್ದಾರೆ. ದಾಖಲೆಗಳಿಗೆ ಬೆಂಕಿ ಬಿತ್ತು, ಲೂಟಿ ಹೊಡೆದವರು, ಮಲ್ಲೇಶ್ವರಂನಲ್ಲಿ ದಾಖಲೆಗಳನ್ನು ಏನು ಮಾಡಿದರು ಎಂದು ಕೇಳಿದರು. ನಾವು ಕೆರೆಕಟ್ಟೆ ನುಂಗಿದವರನ್ನು ಕಕ್ಕಿಸಲು ಹೊರಟಿದ್ದೇವೆ. ಲಕ್ಕಿ ಡಿಪ್ ಮುಖ್ಯಮಂತ್ರಿಯಾದರು. ಬೆಂಗಳೂರಿಗೆ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬಿಜೆಪಿಯವರು ಗುಡಿಸಿ ಗುಂಡಾಂತರ ಮಾಡಿದ್ದಾರೆ ಎಂದು ದೂರಿದರು.
2023ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕ್ರಮವನ್ನು ಜನರ ಮುಂದಿಡಲು 123 ವಾಹನಗಳನ್ನು ಖರೀದಿ ಮಾಡಿ ಅವುಗಳಿಗೆ ಎಲ್‍ಇಡಿ ಸ್ಕ್ರೀನ್ ಅಳವಡಿಸಿದ್ದೇವೆ. 40 ದಿನಗಳಲ್ಲಿ ಈ ಸ್ಕ್ರೀನ್ ಅಳವಡಿಕೆಯಾಗಲಿದೆ ಎಂದರು.
ಜನತಾ ಜಲಧಾರೆ 180 ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಇದರ ಬಗ್ಗೆ ಕಾಂಗ್ರೆಸ್-ಬಿಜೆಪಿಯವರಿಂದ ಪ್ರಮಾಣಪತ್ರ ಪಡೆಯಬೇಕಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಈ ವಾಹನಗಳ ಮೂಲಕ ಪಂಚರತ್ನ ಯೋಜನೆ ತಿಳಿಸುವ ಕೆಲಸ ಮಾಡುತ್ತೇವೆ. ನಾವು ಸುಮ್ಮನೆ ಕೂರುವುದಿಲ್ಲ. ಈ ಹೋರಾಟ ಆರಂಭ ಮಾಡುತ್ತೇವೆ. ರಾಜ್ಯಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದರು.
ಪಕ್ಷ ಬಿಟ್ಟು ಹೋಗುವವರನ್ನು ತಡೆಯುವುದಿಲ್ಲ. ಹೋಗುವವರು ಹೋಗಲಿ ಎಂದ ಅವರು, ವಿಧಾನ ಪರಿಷತ್ ಚುನಾವಣೆಗೆ ಸ್ರ್ಪಸಲು ಹಲವು ಆಕಾಂಕ್ಷಿಗಳಿದ್ದು, ಯಾರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB