ವರದಿ : ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಮನುಷ್ಯನ ಮೊಣಕಾಲಿನ ಎತ್ತರಕ್ಕೆ ರಸ್ತೆಯಲ್ಲಿ ಗುಂಡಿಗಳೇ ಇವೆ, ಅನೇಕ ಶಾಲಾ ಮಕ್ಕಳು ವಿಧಿಯಿಲ್ಲದೇ ಈ ರಸ್ತೆಯಲ್ಲಿಯೇ ಮುಂದೆ ಸಾಗಬೇಕು, ಮಳೆ ಬಂದರೆ ಬಿದ್ದೆದ್ದು ಪ್ರಯಾಣ ಮಾಡುವಂತಹ ಅನಿವಾರ್ಯತೆ ಇದೆ. ಈ ಸಮಸ್ಯೆ ಹಲವು ವರ್ಷಗಳಿಂದ ಹಾಗೇ ಉಳಿದಿದ್ದರೂ ಸಹ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಗ್ರಾಮೀಣ ಭಾಗದ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ತಾಲ್ಲೂಕಿನ ಹೊಳವನಹಳ್ಳಿ ಕ್ಯಾಮೇನಹಳ್ಳಿ ಮಧ್ಯೆ ಇರುವಂತಹ ಶನಿಮಹಾತ್ಮ ದೇವಸ್ಥಾನದಿಂದ ಬೋಮ್ಮಲದೇವಿಪುರ ಗ್ರಾಮದವರೆಗೂ ನೂರಾರು ಗುಂಡಿಗಳು ರಸ್ತೆಯಲ್ಲಿ ಕಾಣಬಹುದಾಗಿದೆ. ಸುಮಾರು ವರ್ಷಗಳಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ತನಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ಕಚೇರಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಹೊಳವನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.
ಹೊಳವನಹಳ್ಳಿಯಿಂದ 50ಕ್ಕೂ ಹೆಚ್ಚು ಗ್ರಾಮಗಳಿಗೆ ಕಲ್ಪಿಸುವ ಈ ರಸ್ತೆಯಲ್ಲಿ ಮೊಣಕಾಲು ಉದ್ದದ ಗುಂಡಿಗಳು ಕಾಣಬಹುದಾಗಿದೆ. ಒಂದು ಬೈಕ್ ಹೋಗಲಾರದಷ್ಟು ಗುಂಡಿಗಳು ಬಿದ್ದಿವೆ. ಇನ್ನೂ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಕೊರಟಗೆರೆ, ತುಮಕೂರು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಘಟನೆಗಳು ನಡೆದಿವೆ. ಹೆರಿಗೆ ಎಂದು ಆಂಬ್ಯುಲೆನ್ಸ್ನಲ್ಲಿ ಬಂದರೆ ರಸ್ತೆಯಲ್ಲಿ ಹೆರಿಗೆ ಆಗುವದಂತೂ ಸತ್ಯ.
ಆರ್ ಟಿಓ ಅಧಿಕಾರಿಗಳೇ ಎಲ್ಲಿದ್ದೀರಾ ?
ಗೌರಿಬಿದನೂರು ತಾಲೂಕಿನ ತೊಂಡೇಬಾವಿಯಲ್ಲಿರುವ ಸಿಮೆಂಟ್ ಕಾರ್ಖಾನೆಯಿಂದ ಪ್ರತಿನಿತ್ಯ ನೂರಾರು ಲಾರಿಗಳು ತೊಂಡೇಬಾವಿಯಿಂದ ಬೈರೇನಹಳ್ಳಿ ಹಾಗೂ ಬಿ.ಡಿ.ಪುರ ಹೊಳವನಹಳ್ಳಿ ಕೊರಟಗೆರೆ ಮಾರ್ಗವಾಗಿ ಬರುತ್ತಿದ್ದು, ಹೆಚ್ಚು ತೂಕ ಹೊತ್ತು ಬರುವ ಲಾರಿಗಳಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದ್ದು, ಇನ್ನೂ ಆರ್ ಟಿಒ ಅಧಿಕಾರಿಗಳು ಇತ್ತ ಕಡೆ ಬರದೆ ಇರುವ ಕಾರಣ ಲಾರಿಗಳು ಇದೆ ಮಾರ್ಗವಾಗಿ ಸಂಚಾರ ಮಾಡುತ್ತವೆ. ಈಗಲಾದರೂ ಆರ್ ಟಿಒ ಹಾಗೂ ಪಿಡಬ್ಲೂಡಿ ಅಧಿಕಾರಿಗಳು ಈ ಮಾರ್ಗವಾಗಿ ಲಾರಿಗಳು ಬರದಂತೆ ಮಾಡಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ತಾಲೂಕಿನ ಗಡಿ ಭಾಗವಾದ ಅಕ್ಕಾಜಿಹಳ್ಳಿ, ಕರೇಚಿಕ್ಕನಹಳ್ಳಿ, ಚಿಕ್ಕಪಾಳ್ಯ, ದೊಡ್ಡಪಾಳ್ಯ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಶಾಲಾ ವಿದ್ಯಾರ್ಥಿಗಳು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು, ಕೊರಟಗೆರೆಗೆ ಬರಬೇಕಾದರೆ 20 ಕಿ.ಮೀ. ದೂರದಿಂದ ಬರಬೇಕು. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡುವವರು ನರಕ ಯಾತನೆ ಅನುಭವಿಸುತ್ತಿದ್ದಾರೆ.
ಕೊರಟಗೆರೆ ಪಟ್ಟಣದಿಂದ ನಮ್ಮ ಗ್ರಾಮಕ್ಕೆ ಸುಮಾರು 20 ಕಿ.ಮೀ ದೂರ ಇದೆ. ನಾವು ಪ್ರತಿನಿತ್ಯ ಇದೆ ರಸ್ತೆಯಲ್ಲಿ ಓಡಾಡಬೇಕು. ಹೊಳವನಹಳ್ಳಿಯಿಂದ ಅಕ್ಕಾಜಿಹಳ್ಳಿವರೆಗೂ ರಸ್ತೆ ತುಂಬಾ ಹಾಳಾಗಿದ್ದು, ಮೊಣಕಾಲು ಉದ್ದದ ಗುಂಡಿಗಳು ಕಾಣಬಹುದಾಗಿದೆ. ಅನೇಕ ಬಾರಿ ವಾಹನ ಸವಾರರು ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಮೆಂಟ್ ತುಂಬಿದ ಲಾರಿಗಳಿಂದ ರಸ್ತೆ ಗುಂಡಿ ಬಿದ್ದಿದ್ದು, ಈ ರಸ್ತೆಯಲ್ಲಿರುವ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ.
— ನಾಗರಾಜು ಚುಂಚೇನಹಳ್ಳಿ ಗ್ರಾಮಸ್ಥ.
ಈಗಾಲೇ ಹೊಳವನಹಳ್ಳಿಯಿಂದ ಬಿ.ಡಿ.ಪುರ ಗ್ರಾಮದವರೆಗೂ ರಸ್ತೆ ನಿರ್ವಹಣೆಗಾಗಿ ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ಅದಷ್ಟು ಬೇಗ ರಸ್ತೆ ಗುಂಡಿ ಮುಚ್ಚವಂತೆ ಕೆಲಸ ಪ್ರಾರಂಭ ಮಾಡಲಾಗುವುದು. ರಸ್ತೆ ಡಾಂಬರಿಕರಣ ಮಾಡುವ ಕೆಲಸಕ್ಕೆ ಈಗಾಲೇ 3 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರು ಮಾಡಲಾಗಿದ್ದು, ಹಣ ಬಂದ ಕೂಡಲೇ ಡಾಂಬರ್ ಹಾಕಲಾಗುವುದು.
— ಸಂಪತ್‌ಕುಮಾರ್, ಎಇಇ ಲೋಕೋಪಯೋಗಿ ಇಲಾಖೆ, ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC