ಕೊರಟಗೆರೆ: ಮೂಕ ಪ್ರಾಣಿಗಳು ಹಾಗೂ ಗ್ರಾಮಸ್ಥರ ಮೇಲೆ ಪದೇ ಪದೇ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೊನಿಗೆ ಬಿದ್ದಿದ್ದು, 2 ವರ್ಷದ ಹೆಣ್ಣು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಂಗನಹಳ್ಳಿಯ ಬೆಟ್ಟದ ತಪ್ಪಲಿನಲ್ಲಿ ಇಡಲಾಗಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದೆ. ಹಲವು ತಿಂಗಳಿನಿಂದ ಇಲ್ಲಿನ ನಿವಾಸಿಗಳ ನೆಮ್ಮದಿ ಕಸಿದುಕೊಂಡಿದ್ದ ಚಿರತೆ ಸೆರೆ ಸಿಕ್ಕಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ, ಎಲೆರಾಂಪುರ ಗ್ರಾಮ ಪಂಚಾಯಿತಿಯ ಹಲವು ಗ್ರಾಮಗಳ ಗ್ರಾಮಸ್ಥರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದ್ದ ಚಿರತೆ, ಇರಕಸಂದ್ರ ಕಾಲೋನಿ ಗ್ರಾಮದ ಹಲವು ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡಿ ಭೀತಿ ಸೃಷ್ಟಿಸಿತ್ತು.
ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು, ಸಾರ್ವಜನಿಕರ ಮನವಿಯಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹಳ್ಳಿಗಳಿಗೆ ಭೇಟಿ ನೀಡಿ ಚಿರತೆ ಹೊರಡುವ ಸ್ಥಳಗಳಲ್ಲಿ ಬೋನ್ ಗಳನ್ನು ಇಡುವ ವ್ಯವಸ್ಥೆಯನ್ನು ಮಾಡಿದ್ದರು. ಇಂದು ಬೆಳ್ಳಂಬೆಳಗ್ಗೆ ಇರಕಸಂದ್ರ ಕಾಲೋನಿಯ ತಂಗನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಇಟ್ಟ ಬೋನಿನಲ್ಲಿ ಸೆರೆ ಸಿಕ್ಕಿದೆ
ಬೋನು ಇಟ್ಟಿದ್ದ ಸ್ಥಳಕ್ಕೆ ಕೊರಟಗೆರೆ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ವರ್ಗವು ಭೇಟಿ ನೀಡಿದ್ದಾರೆ. ಇದೇ ವೇಳೆ ಚಿರತೆ ಸೆರೆ ಸಿಕ್ಕಿದ್ದು, ಗ್ರಾಮಸ್ಥರು ಯಾವುದೇ ಕಾರಣಕ್ಕೂ ಆತಂಕ ಕೊಡುವುದು ಬೇಡ ಎಂದು ಸಂದೇಶ ರವಾನಿಸಿದ್ದಾರೆ.
ಅರಣ್ಯ ಇಲಾಖೆಯ ಕಾರ್ಯಕ್ಕೆ ನೀಲಗೊಂಡನಹಳ್ಳಿ ಹಾಗೂ ಎಲೆರಾಂಪುರ ಗ್ರಾಮ ಪಂಚಾಯತಿಯ ಸುತ್ತಮುತ್ತ ಗ್ರಾಮಗಳ ಜನರು ಧನ್ಯವಾದಗಳು ತಿಳಿಸಿದ್ದಾರೆ.
ವರದಿ : ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz