ಬೆಳಗಾವಿ: ಟಿಪ್ಪು ಸುಲ್ತಾನ್, ಔರಂಗಜೇಬ್ನನ್ನು ವೈಭವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ. ಹಿನ್ನೆಲೆ ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಹಿಂಸಾಚಾರ ಹಿನ್ನೆಲೆ ಕಳೆದ ರಾತ್ರಿ ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ದೀಪಕ್ ಕೇಸರಕರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಸರ್ವಪಕ್ಷ ನಾಯಕರು, ವಿವಿಧ ಸಮುದಾಯಗಳ ಪ್ರಮುಖ ನಾಯಕರ ಜೊತೆ ಶಾಂತಿ ಸಭೆ ನಡೆದಿದೆ. ಸಚಿವ ದೀಪಕ್ ಕೇಸರಕರ್, ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ರು. ಹಾಗೂ ಕೊಲ್ಲಾಪುರ ಡಿಸಿ ಭಗವಾನ್ ಕಾಂಬಳೆ, ಎಸ್ಪಿ ಮಹೇಂದ್ರ ಪಂಡಿತ್ ಸೇರಿ ಹಿರಿಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದರೆ. ಸದ್ಯ ಈಗ ಜೂನ್ 19ರವರೆಗೆ ಕೊಲ್ಲಾಪುರದಲ್ಲಿ ನಿಷೇಧಾಜ್ಞೆ ಮುಂದುವರಿಕೆಗೆ ಕೊಲ್ಲಾಪುರ ಜಿಲ್ಲಾಧಿಕಾರಿ ಭಗವಾನ್ ಕಾಂಬಳೆ ಆದೇಶ ಹೊರಡಿಸಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆವರೆಗೆ ಕೊಲ್ಲಾಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.
ಮತ್ತೊಂದೆಡೆ ಗಡಿ ಜಿಲ್ಲೆ ಬೆಳಗಾವಿಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ಮಧ್ಯರಾತ್ರಿಯವರೆಗೂ ಬೆಳಗಾವಿ ಜಿಲ್ಲೆ ಗಡಿ ಗ್ರಾಮಗಳಲ್ಲಿ ಗಸ್ತು ತಿರುಗಿ ಪೊಲೀಸರು ಎಚ್ಚರಿಕೆ ವಹಿಸಲಿದ್ದಾರೆ. ಬೆಳಗಾವಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಿಪ್ಪಾಣಿ, ಕೊಗನೊಳ್ಳಿ, ಬೋರಗಾಂವ್, ಅಕ್ಕೋಲ, ಎಕ್ಸಂಬಾ, ಬೇಡಕಿಹಾಳ, ಮಣಕಪುರ, ಸಿದ್ನಾಳ, ಮಂಗೂರ, ಚಂದೂರ ಸೇರಿ ಹಲವು ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


