ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ನಿವಾಸಿಗಳು ಈಗ ಕರಡಿ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಪಟ್ಟಣದ ತಾಲ್ಲೂಕು ಕಚೇರಿಯ ಹಿಂಭಾಗದಲ್ಲಿರುವ ಜನವಸತಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಕರಡಿಯೊಂದು ಓಡಾಡುತ್ತಿರುವುದು ಕಂಡುಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಜನವಸತಿ ಪ್ರದೇಶದಲ್ಲಿ ಕರಡಿ ಸಂಚರಿಸುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪಟ್ಟಣದ ನಿವಾಸಿಗಳ ನಿದ್ದೆಗೆಡಿಸಿದೆ.
ಈ ಹಿಂದೆಯೂ ಇದೇ ಭಾಗದಲ್ಲಿ ಕರಡಿ ಮತ್ತು ಚಿರತೆಗಳ ಓಡಾಟ ಕಂಡುಬಂದಿತ್ತು. ಮುಂಜಾನೆ ವಾಕಿಂಗ್ ಗೆ ತೆರಳುವ ಸಮಯದಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಈ ಪ್ರದೇಶದಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಈಗಾಗಲೇ ಹಲವು ಬಾರಿ ದೂರು ನೀಡಿ, ಪ್ರಾಣಿಗಳನ್ನು ಹಿಡಿಯುವಂತೆ ಮನವಿ ಮಾಡಲಾಗಿತ್ತು. “ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಷ್ಟು ಬಾರಿ ತಿಳಿಸಿದರೂ ಅವರು ಈ ಬಗ್ಗೆ ಸೂಕ್ತ ಗಮನ ಹರಿಸುತ್ತಿಲ್ಲ” ಎಂದು ಈ ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಈ ಕರಡಿಯನ್ನು ಸೆರೆಹಿಡಿದು ಜನರ ಆತಂಕ ದೂರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


