ಕೊರಟಗೆರೆ: ಕೆರೆಯ ನೀರು ನುಗ್ಗಿದ ಪರಿಣಾಮ ರೈತರು ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ನಾಶವಾಗುವ ಭೀತಿ ಸೃಷ್ಟಿಯಾಗಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ರೈತರು ತೀವ್ರ ಆತಂಕದಲ್ಲಿದ್ದಾರೆ.
ಕಾಲುವೆ ಮುಚ್ಚಿ ಹೋದ ಪರಿಣಾಮ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ಕೆರೆಯ ತೂಬಿನಿಂದ ಹಾದು ಹೋಗುವ ನೀರು ಸಮರ್ಪಕವಾಗಿ ಹಾದು ಹೋಗುತ್ತಿಲ್ಲ. ಹೀಗಾಗಿ ರಭಸವಾಗಿ ಬರುತ್ತಿರುವ ನೀರು ಅಡಿಕೆ ತೋಟ ಹಾಗೂ ರೈತರ ಬೆಳೆಗೆ ನುಗ್ಗಿ ಬೆಳೆ ನಾಶವಾಗುತ್ತಿದ್ದು, ಬೆಳೆದು ನಿಂತ ಅಡಿಕೆ ತೋಟ ಕೊಚ್ಚಿ ಹೋಗಿ ನಾಶವಾಗುವ ಭೀತಿ ಸೃಷ್ಟಿಯಾಗಿದೆ.
ದೊಡ್ಡ ಸಾಗ್ಗೆರೆ ಹಾಗೂ ಗಜಮುದ್ದನ ಹಳ್ಳಿ ಮಧ್ಯಭಾಗದಲ್ಲಿ ಬರುವಂತಹ ದೊಡ್ಡಸಾಗ್ಗೆರೆ ಕೆರೆಯ ನೀರು ಸುತ್ತಮುತ್ತಲಿನ 4-5 ಹಳ್ಳಿಗಳ ಜನರ ಮನೆಗಳಿಗೆ ನುಗ್ಗುವ ಆತಂಕ ಸೃಷ್ಟಿಯಾಗಿದೆ. ಕಳೆದ 15-20 ವರ್ಷಗಳ ಭೀಕರ ಬರಗಾಲದ ಸಂದರ್ಭದಲ್ಲಿ ಇಲ್ಲಿನ ರೈತರು ಕಾಲುವೆ ಒತ್ತುವರಿ ಮಾಡಿಕೊಂಡಿರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ. ಜೊತೆಗೆ ಹೊಸದಾಗಿ ನಿರ್ಮಾಣವಾಗಿರುವ ರಸ್ತೆಗೆ ಸೇತುವೆ ನಿರ್ಮಾಣ ಮಾಡದ ಕಾರಣ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ರೈತರ ಜಮೀನುಗಳಿಗೆ ನೀರು ನುಗ್ಗಿ ರೈತರ ಬೆಳೆಗಳು ನಾಶವಾಗಿವೆ.
ಈ ಭಾಗದ ನೂರಾರು ರೈತರು ಹಲವು ಬಾರಿ ಜಿಲ್ಲಾ ಪಂಚಾಯತ್ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ, ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಹೀಗಾಗಿ ಇಂದಿನ ಈ ಪರಿಸ್ಥಿತಿಗೆ ಅಧಿಕಾರಿಗಳೇ ನೇರ ಹೊಣೆಗಾರಿಕೆಯಾಗಿದ್ದು, ತ್ವರಿತವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಜೊತೆಗೆ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz