ಕೊರಟಗೆರೆ: ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಡಿ.31ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.
ನಗರಾಭಿವೃದ್ಧಿ ಯೋಜನಾ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಯೋಗಾನಂದ್ ಅವರು ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿರುವ ಅಧಿಕೃತ ಅಧಿಸೂಚನೆಯ ಮಾಹಿತಿ ನೀಡಿದ್ದು, ದಿ. 31–12–2025ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್ ಅವರ ಸಹಿಯೊಂದಿಗೆ ಪ್ರಕಟಗೊಂಡಿರುವ ವಿಶೇಷ ರಾಜ್ಯ ಪತ್ರಿಕೆ ಸಂಖ್ಯೆ: ನಅಇ 73 ಎಂಎಲ್ ಆರ್ 2025(ಇ)ರಲ್ಲಿ ಕರ್ನಾಟಕ ಪೌರಸಭೆಗಳ ಕಾಯ್ದೆ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನವೆತ್ತ ರಾಜ್ಯಪಾಲರು ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಸಣ್ಣ ನಗರ ಪ್ರದೇಶವೆಂದು ಉದ್ಘೋಷಿಸಿ, ಕೊರಟಗೆರೆ ಪುರಸಭೆಯಾಗಿ ಪದನಾಮೀಕರಿಸಿ ಉದ್ಘೋಷಿಸಿರುತ್ತಾರೆ ಎಂದು ತಿಳಿಸಿದ್ದಾರೆ.
14 ಗ್ರಾಮಗಳು ಪುರಸಭೆ ವ್ಯಾಪ್ತಿಗೆ:
ನೂತನ ಪುರಸಭೆ ವ್ಯಾಪ್ತಿಗೆ ಸದರಿ ಕೊರಟಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 17.53 ಚದರ ಕಿಲೋಮೀಟರ್ ಪಟ್ಟಣ ಪ್ರದೇಶದ ಜೊತೆಗೆ ಕೊರಟಗೆರೆ ತಾಲ್ಲೂಕಿನ ಹೂಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಳ್ಳಿ, ಹೊಸಹಳ್ಳಿ, ಕಾಮೇನಹಳ್ಳಿ, ಒಬ್ಬರದೇವರಹಳ್ಳಿ, ಗುಂಡಿನಪಾಳ್ಯ, ಹೂಲಿಕುಂಟೆ, ಚಿಕ್ಕೇಗೌಡನಹಳ್ಳಿ ಹಾಗೂ ಕಾಮರಾಜನಹಳ್ಳಿ ಗ್ರಾಮವನ್ನು ಸೇರ್ಪಡೆಗೊಳಿಸಲಾಗಿದೆ. ತುಂಬಾಡಿ ಗ್ರಾಮ ಪಂಚಾಯಿತಿಯ ಕಂಬದಹಳ್ಳಿ, ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿ, ಮಲ್ಲೇಶ್ವರ ಗ್ರಾಮ ಹಾಗೂ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಜಂಪೇನಹಳ್ಳಿ, ಕಲ್ಲುಗುಟ್ಟರಹಳ್ಳಿ ಹಾಗೂ ಅಗ್ರಹಾರ ಗ್ರಾಮವನ್ನು ಸೇರ್ಪಡೆಗೊಳಿಸಲಾಗಿದೆ.
ಎರಡುವರೆ ದಶಕಗಳ ಹಿಂದೆ ಕೊರಟಗೆರೆ ಪುರಸಭೆ ಸ್ಥಾನವನ್ನೇ ಹೊಂದಿತ್ತು. ನಂತರದಲ್ಲಿ ಮತ್ತೆ ಪಟ್ಟಣ ಪಂಚಾಯಿತಿ ಸ್ಥಾನಕ್ಕೆ ಇಳಿದು, ಈಗ ಮತ್ತೊಮ್ಮೆ ಪುರಸಭೆಯಾಗಿ ಮೇಲ್ದರ್ಜೆಗೇರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


