ಕಲಬುರಗಿ: ಸದನದಲ್ಲಿ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಚಿವ ಕೃಷ್ಣ ಭೈರೇಗೌಡ ಅವರು ನಾನು ಹಣ ಪಡೆದು ಕೆಲಸ ಕೊಟ್ಟಿರುವುದಾಗಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತ ಮಟ್ಟದ ತನಿಖೆ ಆಗಬೇಕು. ಈ ತನಿಖೆ ಮುಗಿಯುವವರೆಗೂ ನಾನು ಸದನಕ್ಕೆ ಹೋಗುವುದಿಲ್ಲ ಎಂದು ಶಾಸಕ ಬಿ. ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ನಾನು ಪ್ರತಿಭಟನೆ ಮಾಡಿದ್ದೆ. ಆಗ ಯಾರೊಬ್ಬ ಶಾಸಕರೂ ನನ್ನ ಬೆಂಬಲಕ್ಕೆ ಬರಲಿಲ್ಲ. ನಮ್ಮ ಜಿಲ್ಲೆಯ ಶಾಸಕರು ಸಹ ನನ್ನ ಬೆಂಬಲಕ್ಕೆ ಬರಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಟೀಲ್ ಮಾತ್ರ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಷಯ ನಾನು ಪ್ರಸ್ತಾವನೆ ಮಾಡಿರಲಿಲ್ಲ. ಇದೀಗ ಈ ವಿಚಾರದ ಬಗ್ಗೆ ನಾನು ಮತ್ತೆ ಪತ್ರ ಬರೆದಿದ್ದೇನೆ. ನನ್ನ ಜೀವಮಾನದಲ್ಲಿ ಸ್ವಾಭಿಮಾನದಿಂದ ಬದುಕಿದವನು, ಇಲ್ಲದಿದ್ದರೆ ನಾನು ಸತ್ತಂತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.


