ಮಧುಗಿರಿ: ತಾಲೂಕಿನಲ್ಲಿ ಕೃಷಿ ಇಲಾಖೆಯ ಬಗ್ಗೆ ಹಲವಾರು ಆರೋಪಗಳಿದ್ದು, ರೈತರ ಪರ ಕೆಲಸ ನಿರ್ವಹಿಸಬೇಕಾದ ಇಲಾಖೆಯೇ ರೈತರಿಗೆ ತಲೆ ನೋವಾಗಿದೆ. ನಿಮಗೆ ನಿಭಾಯಿಸಲು ಸಾಧ್ಯ ವಾಗದ್ದಿದ್ದರೆ ವರ್ಗಾವಣೆ ಪಡೆದುಕೊಂಡು ಹೋಗಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಅವರ ಬಗ್ಗೆ ಶಾಸಕ ಎಂ.ವಿ.ವೀರಭದ್ರಯ್ಯ ಕೆ.ಡಿ.ಪಿ.ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಎಂ.ವಿ.ವೀರಭದ್ರಯ್ಯ ನವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಶಾಸಕರು ಕೃಷಿ ಇಲಾಖೆಯ ಕಾರ್ಯ ವೈಖರಿ ಬಗ್ಗೆ ತರಾಟೆಗೆತ್ತಿಕೊಂಡರು. ರಾಜಕೀಯ ಮಾಡುವುದನ್ನು ಬಿಟ್ಟು ರೈತರ ಪರ ಕೆಲಸ ನಿರ್ವಹಿಸಿ, ಇಲಾಖೆಯ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ನಿರ್ವಹಿಸಿ ಇಲ್ಲದಿದ್ದರೆ ವರ್ಗಾವಣೆ ಪಡೆದು ಹೊರಟು ಹೋಗಿ ಬೇರೆಯವರು ಬಂದು ನಿಮ್ಮ ಇಲಾಖೆಯ ಕೆಲಸ ನಿರ್ವಹಿಸುತ್ತಾರೆ ಎಂದರು.
ತಾಲೂಕಿನ ಪ್ರತಿ ಗ್ರಾಮಗಳ ಪೆಟ್ಟಿಗೆ ಅಂಗಡಿಗಳಲ್ಲೂ ಕೂಡ ಮದ್ಯ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಅಬಕಾರಿ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ ಎಂದು ಅಬಕಾರಿ ನಿರೀಕ್ಷಕ ರಾಮಮೂರ್ತಿ ಅವರನ್ನು ಪ್ರಶ್ನಿಸಿದ ಶಾಸಕರು ಮುಂದಿನ ದಿನಗಳಲ್ಲಿ ಇವುಗಳಿಗೆ ಕಡಿವಾಣ ಹಾಕಿ ಎಂದರು.
ಎತ್ತಿನ ಹೊಳೆ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ತಿಂಗಳಿಗೆ ಕೇವಲ 1 ಕಿ.ಮೀ.ನಷ್ಟು ದೂರ ಮಾತ್ರ ಕಾಮಗಾರಿ ನಡೆಯುತ್ತಿದ್ದು, ಹೀಗಾದರೆ ಕಾಮಗಾರಿ ಮುಗಿದು ತಾಲೂಕಿನ ಕೆರೆಗಳಿಗೆ ನೀರು ಹರಿಸುವುದು ಯಾವಾಗ ಎಂದು ಇಲಾಖೆಯ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದಾಗ, ಅನುದಾನದ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದ್ದು ಈಗಾಗಲೇ ಕೆಲಸ ನಿರ್ವಹಿಸಿರುವ ಕಾಮಗಾರಿಯ ಬಾಬ್ತು ಇನ್ನು 150 ಕೋಟಿ ರೂ. ಸರಕಾರ ಬಾಕಿ ಪಾವತಿಸಬೇಕಿದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಕೋವಿಡ್ ನಂತರ ಹಾಸ್ಟಲ್ ಗಳ ಪರಿಸ್ಥಿತಿ ಹೇಗಿದೆ? ಎಷ್ಟು ಜನ ವಿಧ್ಯಾರ್ಥಿಗಳು ತಾಲೂಕಿನಲ್ಲಿ ಹಾಸ್ಟಲ್ ಗಳ ಪ್ರವೇಶಕ್ಕೆ ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ಕೇಳಿದಾಗ, ಕೋವಿಡ್ ಆರಂಭಕ್ಕೂ ಮುಂಚೆ 1,593 ವಿಧ್ಯಾರ್ಥಿಗಳಿದ್ದು ಈಗ 1,213 ವಿದ್ಯಾರ್ಥಿಗಳು ಪ್ರವೇಶ ಪಡೆದು ಕೊಂಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಚಂದ್ರಶೇಖರ್ ಮಾಹಿತಿ ನೀಡಿದಾಗ, ಹಾಸ್ಟೆಲ್ ಗಳಲ್ಲಿ ಊಟದ ಸೌಲಭ್ಯಗಳನ್ನು ನಿರ್ವಹಿಸಿ ಮೆನ್ಯೂ ಪ್ರಕಾರವೇ ಊಟವನ್ನು ನೀಡಬೇಕು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯು ಜಾಗೃತಿ ವಹಿಸಿ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಈಗಿರುವ ಸರಕಾರಿ ನ್ಯಾಯಬೆಲೆ ಅಂಗಡಿಗಳನ್ನು ಹೊಸದಾಗಿ ಜಾರಿಯಾಗಿರುವ ಸರಕಾರಿ ಅದೇಶದಂತೆ ತಾಲೂಕಿನಲ್ಲಿ ಸುಮಾರು 40 ಹೊಸ ಅಂಗಡಿಗಳನ್ನು ತೆರಿಯಬಹುದು ನಿರುದ್ಯೋಗಿ ವಿದ್ಯಾವಂತರಿಗೆ ಅನುಕೂಲವಾಗಲಿದ್ದು, ಗ್ರಾಮಗಳಲ್ಲೇ ನ್ಯಾಯ ಬೆಲೆ ಅಂಗಡಿ ತೆರೆದರೆ ಪಡಿತರದಾರರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ ತಿಳಿಸಿದರು.
ಸಭೆಯಲ್ಲಿ ತಾ.ಪಂ.ಇ.ಒ. ಲಕ್ಷ್ಮಣ್ ಮಾತನಾಡಿ, ಸರಕಾರದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಅತಿಜರೂರಾಗಿ ಮಾಡಬೇಕು ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ ಒಳಗೆ ಸಂಪೂರ್ಣವಾಗಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಎಇಇ ರಾಜಗೋಪಾಲ್, ಜಿ.ಪಂ.ಎಇಇ ಸುರೇಶ್ ರೆಡ್ಡಿ, ಅರಣ್ಯ ಇಲಾಖೆ ಅಧಿಕಾರಿ ರವಿ, ಸಿ.ಡಿ.ಪಿ.ಒ.ಎಸ್.ಅನಿತಾ, ಬಿ.ಇ.ಒ.ನಂಜುಂಡಯ್ಯ, ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು, ಆಹಾರ ಇಲಾಖೆಯ ಶಿರಸ್ಥೆ ದಾರ್ ಗಣೇಶ್, ತೊಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥಗೌಡ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ರಾಮ್ ದಾಸ್, ಪುರಸಭೆ ಮುಖ್ಯಾಧಿಕಾರಿ ನಜ್ಮಾ, ಸಾಮಾಜಿಕ ಆರಣ್ಯ ಇಲಾಖೆಯ ತಾರಕೇಶ್ವರಿ, ಬೆಸ ಕಾಂ ಇಲಾಖೆಯ ಎಇಇ ಶ್ರೀನಿವಾಸ್, ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy