ಹಿರಿಯೂರು: ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ವ್ಯಕ್ತಿಯೋರ್ವರಿಗೆ ಯುವಕನೊಬ್ಬನೊಬ್ಬ ಚಾಕುವಿನಿಂದ ಇರಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಕೃಷ್ಣ ರಾಜಪುರ ರಸ್ತೆಯಲ್ಲಿ ನಡೆದಿದೆ .
35 ವರ್ಷ ವಯಸ್ಸಿನ ಸಮೀವುಲ್ಲಾ ಚಾಕು ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು, ನೂತನ್ ಎಂಬ ಯುವಕ ಚಾಕುವಿನಿಂದ ಇರಿದ ಆರೋಪಿಯಾಗಿದ್ದಾನೆಂದು ತಿಳಿದು ಬಂದಿದೆ.
ಕಳೆದ ವರ್ಷ ಗಣೇಶ ಹಬ್ಬದಂದು ಆಲೂರು ಜಾಮಿಯಾ ಮಸೀದಿ ಎದುರು ಪಟಾಕಿ ಸಿಡಿಸಲಾಗಿತ್ತು. ಇದಕ್ಕೆ ಸಮೀವುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದನಂತೆ. ಆಗಿನಿಂದ ನೂತನ್ ಹಾಗೂ ಮೆಮ್ ಸಮೀವುಲ್ಲಾ ನಡುವೆ ಪರಸ್ಪರ ದ್ವೇಷ ಬೆಳದಿತ್ತು ಎನ್ನಲಾಗಿದೆ.
ಇನ್ನು ಮೊನ್ನೆ ರಾತ್ರಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಈ ವೇಳೆ ನೂತನ್ ಸಮಿವುಲ್ಲಾನಿಗೆ ಚಾಕು ಇರಿದು ಗಾಯಗೊಳಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಗಾಯಗೊಂಡಿರುವ ಸಮೀವುಲ್ಲಾನ ಸ್ಥಿತಿ ಗಂಭೀರವಾಗಿದ್ದು, ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹಿರಿಯೂರು ತಾಲ್ಲೂಕಿನ ಗ್ರಾಮಾಂತರ ಪೋಲಿಸ್ ಠಾಣೆ ಪಿ ಎಸ್ ಐ ಲೋಕೇಶ್ ಹೆಚ್.ವಿ. ಅವರು ಮಾಹಿತಿ ನೀಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ನೂತನ್ ನನ್ನು ದಾವಣಗೆರೆಯ ಹೆಬ್ಬಾಳ್ ಗೇಟ್ ಬಳಿ ಹಿರಿಯೂರು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಎಸ್ಪಿ ಪರಶುರಾಮ್, ಕೋಮುದ್ವೇಷದ ಹಿನ್ನೆಲೆಯಲ್ಲಿ ಚಾಕು ಇರಿದಿಲ್ಲ.ಇದುವರೆಗಿನ ತನಿಖೆ ಪ್ರಕಾರ ಕೋಮುದ್ವೇಷದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಜೊತೆಗೆ ಆರೋಪಿ ನೂತನ್ ಬಿಜೆಪಿ ಅಥವಾ ಭಜರಂಗದಳದ ಕಾರ್ಯಕರ್ತನಲ್ಲ, ಆದರೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಸಮೀವುಲ್ಲಾ ಬೆಂಬಲ ನೀಡಿದ್ದನು. ಹೀಗಾಗಿ ಇದುವರೆಗೂ ಇಡೀ ಪ್ರಕರಣದಲ್ಲಿ ಯಾವುದೇ ಪಕ್ಷ ರಾಜಕಾರಣ ಕಂಡು ಬಂದಿಲ್ಲ.ಆರೋಪಿ ನೂತನ್ ನನ್ನು ಬಂಧಿಸಲಾಗಿದೆ ಎಂದರು.
ಮದ್ಯದ ಅಮಲಿನಲ್ಲಿದ್ದ ನೂತನ್ ಸಮೀವುಲ್ಲಾನನ್ನು ಗುರಾಯಿಸಿದ್ದ. ಇದನ್ನು ಸಮೀವುಲ್ಲಾ ಪ್ರಶ್ನಿಸಿದ್ದ. ಇದಾದ ಬಳಿಕ ನೂತನ್ ಮನೆಗೆ ಹೋಗಿ ಚಾಕು ತಂದು ಸಮೀವುಲ್ಲಾನಿಗೆ ಇರಿದಿದ್ದಾನೆ. ಇವರಿಬ್ಬರ ಮಧ್ಯೆ ಯಾವುದೇ ಹಳೇ ದ್ವೇಷ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪಿ ನೂತನ್ ಅಲಿಯಾಸ್ ಪಿಂಟು ವಿರುದ್ಧ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


