ಮಂಡ್ಯ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಪಾಲಾಗಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ ನೇರ ಕಾರಣ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಕದಲೂರು ಉದಯ್, ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. “ಅಣ್ಣನ ಮಗನನ್ನೇ ಸಹಿಸಿಕೊಳ್ಳಲಾಗದ ಕುಮಾರಸ್ವಾಮಿ ಅವರು ನಮ್ಮನ್ನು ಸಹಿಸಿಕೊಳ್ಳುತ್ತಾರೆಯೇ? ತಮ್ಮ ಮಗ (ನಿಖಿಲ್ ಕುಮಾರಸ್ವಾಮಿ) ಚುನಾವಣೆಯಲ್ಲಿ ಸೋತಿದ್ದಕ್ಕೆ ಷಡ್ಯಂತ್ರ ಹೂಡಿ, ಪ್ರಜ್ವಲ್ ರೇವಣ್ಣ ಅವರನ್ನು ಜೈಲಿಗೆ ಕಳುಹಿಸಿದ್ದಾರೆ” ಎಂದು ಅವರು ಆರೋಪಿಸಿದರು. ಅಷ್ಟೇ ಅಲ್ಲದೆ, “ಒಂದು ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮನಸ್ಸು ಮಾಡಿದ್ದರೆ ಪ್ರಜ್ವಲ್ ಅವರನ್ನು ಬಿಡಿಸಬಹುದಿತ್ತು” ಎಂಬ ಮಾತನ್ನೂ ಅವರು ಸೇರಿಸಿದ್ದಾರೆ.
ಕುಮಾರಸ್ವಾಮಿಗೆ ಸವಾಲು:
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಸವಾಲು ಹಾಕಿದ ಉದಯ್, “ನಿಮಗೆ ತಾಕತ್ತಿದ್ದರೆ ಮಂಡ್ಯಕ್ಕೆ ಹೊಸ ಕೈಗಾರಿಕೆಗಳನ್ನು ತನ್ನಿ. ಅದಕ್ಕಾಗಿ ನಾನೇ 60 ರಿಂದ 70 ಎಕರೆ ಜಮೀನು ನೀಡುತ್ತೇನೆ. ಅಭಿವೃದ್ಧಿ ಮಾಡಲು ಛಲವಿರಬೇಕು, ರೈತರ ಕಷ್ಟ ಗೊತ್ತಿರಬೇಕು. ಬರೀ ಟಿವಿ ಮುಂದೆ ಕುಳಿತು ಭಾಷಣ ಮಾಡಿದರೆ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಟೀಕಿಸಿದರು.
ಪ್ರತಿಭಟನೆಗೆ ಫಂಡಿಂಗ್ ಆರೋಪ:
ಗೆಜ್ಜಲಗೆರೆಯಲ್ಲಿ ನಗರಸಭೆ ಸೇರ್ಪಡೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ವಿರೋಧ ಪಕ್ಷದವರ ಕೈವಾಡವಿದೆ ಎಂದು ಅವರು ಕಿಡಿಕಾರಿದರು. “ನನ್ನ ವಿರುದ್ಧ ಪ್ರತಿಭಟನೆ ಮಾಡಲು ಹಣ ಹಂಚಲಾಗುತ್ತಿದೆ. ನನ್ನ ವೈಯಕ್ತಿಕ ವಿಚಾರಗಳನ್ನು ಬಿಚ್ಚಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ನನ್ನದೇನೂ ಮೂರು ಮದುವೆಯಾಗಿಲ್ಲ ಬಿಚ್ಚಿಡಲು. ನಾನು ಸಾಮಾನ್ಯ ರೈತನ ಮಗ, ಅವರಂತೆ ಹೆಲಿಕಾಪ್ಟರ್‌ನಲ್ಲಿ ಓಡಾಡುವವನಲ್ಲ” ಎಂದು ತಿರುಗೇಟು ನೀಡಿದರು.
ಒಕ್ಕಲಿಗ ಯುವಕರು ಬೆಳೆಯುವುದನ್ನು ತಡೆಯಬೇಡಿ ಮತ್ತು ರಾಜಕೀಯಕ್ಕಾಗಿ ಸಮುದಾಯವನ್ನು ಬಳಸಿಕೊಳ್ಳಬೇಡಿ ಎಂದು ಅವರು ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


