ಕುಣಿಗಲ್: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಅವರ ಜಯಂತಿಗಳನ್ನು ಒಟ್ಟಿಗೆ ಆಚರಿಸುವ ಸಂಬಂಧ ಬಲ ಹಾಗೂ ಎಡಗೈ ಸಮುದಾಯಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು ಒಮ್ಮತಕ್ಕೆ ಬಾರದ ಕಾರಣ ಈ ಬಾರಿ ಇಬ್ಬರು ಮಹಾನ್ ನಾಯಕರ ಜಯಂತಿ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ಆಚರಣೆ ಮಾಡಲು ತೀರ್ಮಾನ ಕೈಗೊಂಡ ಪ್ರಸಂಗ ಜಯಂತಿ ಪೂರ್ವಭಾವಿ ಸಭೆಯಲ್ಲಿ ಬುಧವಾರ ನಡೆಯಿತು.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಜಯಂತಿ ಆಚರಣೆ ಸಂಬಂಧ ತಹಶೀಲ್ದಾರ್ ಕರಿಯಪ್ಪನಾಯ್ಕ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧ ತಹಶೀಲ್ದಾರ್ ನ್ಯಾಯಾಲಯದ ಸಭಾಂಗಣದಲ್ಲಿ ಸಭೆ ನಡೆಯಿತು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಯ್ಯ ಮಾತನಾಡಿ, ಪ್ರತಿ ವರ್ಷ ಏ.5ರಂದು ಡಾ. ಬಾಬು ಜಗಜೀವನರಾಂ ಅವರ ಜಯಂತಿಯನ್ನು ಸರಳವಾಗಿ ಆಚರಿಸಿ, ಬಳಿಕ ಏ.14ರಂದು ನಡೆಯುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ವೇಳೆ ಇಬ್ಬರು ಮಹಾನ್ ನಾಯಕರ ಜಯಂತಿಯನ್ನು ಒಟ್ಟಿಗೆ ಅದ್ದೂರಿಯಾಗಿ ಬಹಳ ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಆಚರಣೆ ಮಾಡಬೇಕೆಂದು ಸಭೆ ಗಮನಕ್ಕೆ ತಂದರು.
ಒಟ್ಟಿಗೆ ಆಚರಿಸಲು ಛಲವಾದಿ ಮುಖಂಡರ ವಿರೋಧ: ಆಗ ಛಲವಾದಿ (ಬಲಗೈ) ಸಮುದಾಯದ ಮುಖಂಡ ಬಿ.ಜಿ. ಗಂಗಾಧರ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜಯಂತಿಯನ್ನು ಒಟ್ಟಿಗೆ ಆಚರಣೆ ಮಾಡುವುದು ಸರಿಯಲ್ಲ ಎಂದು ವಿರೋಧಿಸಿದರು.
ಬೇರೆಯಾಗಿ ಆಚರಿಸಲು ಮಾದರ ಮಹಾಸಭಾ ವಿರೋಧ: ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಪ್ರತಿವರ್ಷ ಡಾ.ಬಿ.ಆರ್.ಅಂಬೇಡ್ಕರ್, ಡಾ. ಬಾಬು ಜಗಜೀವನರಾಂ ಜಯಂತಿಯನ್ನು ಒಟ್ಟಿಗೆ ಹೇಗೆ ಆಚರಣೆ ಮಾಡಿಕೊಂಡು ಬರುತ್ತಿದ್ದೇವೋ ಹಾಗೆ ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಆಶಯ. ಇತರ ಸಮುದಾಯದವರು ನಮ್ಮನ್ನು ಗಮನಿಸುತ್ತಿದ್ದಾರೆ. ಈ ಹಿಂದೆ ಸಾಕಷ್ಟು ತಹಶೀಲ್ದಾರ್‌ಗಳು ಬಂದು ಹೋಗಿದ್ದಾರೆ. ಹೊಸ ಬೆಳವಣಿಗೆ ಮಾಡಿದರೆ ನಿಮಗೆ ಕಳಂಕ ಬರುತ್ತದೆ ಎಂದು ತಹಸೀಲ್ದಾರ್ ಕರಿಯಪ್ಪನಾಯ್ಕ ಅವರಿಗೆ ಎಚ್ಚರಿಸಿದರು.
ಅಂಬೇಡ್ಕರ್ ಫೋಟೋ ಜೊತೆ ಜಗಜೀವನರಾಂ ಫೋಟೋಗೆ ವಿರೋಧ: ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಫೋಟೋ ಜೊತೆ ಬಾಬು ಜಗಜೀವನರಾಂ ಫೋಟೋವನ್ನು ಇಡುವುದಾಗಿ ತಹಶೀಲ್ದಾರ್ ಕರಿಯಪ್ಪನಾಯ್ಕ ತಿಳಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಛಲವಾದಿ ಮುಖಂಡ ಬಿ.ಜಿ.ಗಂಗಾಧರ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋದೊಂದಿಗೆ ಜಗಜೀವನರಾಂ ಅವರ ಫೋಟೋ ಇಡಲು ನಾವು ಅವಕಾಶ ನೀಡುವುದಿಲ್ಲ ಎಂದರು. ಆಗ ಮಾದಿಗ ಮುಖಂಡರಾದ ಎ. ಶಿವಶಂಕರ್, ಮಲ್ಲಿಪಾಳ್ಯ ಶ್ರೀನಿವಾಸ್, ನಿಮ್ಮ ಸಮುದಾಯ ನಿಮಗೆ ಹೇಗೆ ಹೆಚ್ಚೋ ಹಾಗೆ ನಮ್ಮ ಸಮುದಾಯವು ನಮಗೆ ಹೆಚ್ಚು. ಈ ಸಭೆಯಲ್ಲಿ ನೀವು ಹೀಗೆ ಮಾತನಾಡಬಾರದು ಎಂದು ತಾಕೀತು ಪಡಿಸಿದರು.
ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಒತ್ತಾಯ: ಈವರೆಗೂ ಅಂಬೇಡ್ಕರ್ ಅವರ ಪ್ರತಿಮೆ ಸಂಬಂಧ ಶಾಸಕರಾಗಲಿ, ತಾಲೂಕು ಆಡಳಿತವಾಗಲಿ ಅಥವಾ ಸ್ಥಳೀಯ ಪುರಸಭೆಯಾಗಲಿ ಕ್ರಮಕೈಗೊಂಡು ಪ್ರತಿಮೆ ನಿರ್ಮಾಣಕ್ಕಾಗಿ ಗುರುತಿಸಿಲ್ಲ ಎಂದು ಮಲ್ಲಿಪಾಳ್ಯ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು. ನೀವೇನಾದರೂ ಈ ಕೆಲಸ ಮಾಡದಿದ್ದರೆ ನನ್ನ ಸ್ವಂತ ಹಣದಿಂದ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ತಹಶೀಲ್ದಾರ್ ಗಮನಕ್ಕೆ ತಂದರು.
ಈ ಸಂಬಂಧ ಶಾಸಕರೊಂದಿಗೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರ್ ಕರಿಯಪ್ಪನಾಯ್ಕ ಭರವಸೆ ನೀಡಿದರು. ಸಭೆಯಲ್ಲಿ ತಾ.ಪಂ ಇಒ ವಸಂತಕುಮಾರ್, ಪ್ರಭಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾ ಮಣಿ, ಟಿಎಚ್ ಒ ಡಾ. ಮರಿಯಪ್ಪ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


