ಕುಣಿಗಲ್: ಪಟ್ಟಣದ ಕೋಟೆ ತುಡಿಕೆ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಡಿ.30 ರಂದು 20 ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವ ಅಂಗವಾಗಿ ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸೇವಾ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದ ದೇವಾಲಯದ ಬಳಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾರಾಯಣ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸ್ (ವಾಸು), ಖಜಾಂಚಿ ಕೆ.ಎನ್.ನಾಗರಾಜು (ನಾಗಣ್ಣ) ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿ ಮಹೋತ್ಸವ ಅಂಗವಾಗಿ ಡಿ.29 ರಂದು ಸಂಜೆ 4 ಗಂಟೆಗೆ ವಿವಿಧ ಧಾರ್ಮಿಕ ವಿಧಿವಿಧಾನ ಹಮ್ಮಿಕೊಳ್ಳಲಾಗಿದೆ. ನಂತರ ಡಿ. 30 ರಂದು ಬೆಳಗ್ಗೆ 5 ಗಂಟೆಗೆ ಗೋ ಪೂಜೆಯಿಂದ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಪ್ತದ್ವಾರದ ಮೂಲಕ ಸ್ವಾಮಿಯ ದರ್ಶನ ಹಾಗೂ ನಿರಂತರ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ತಿರುಪ್ಪಾವಡೆ ಸೇವೆ: ಡಿ.31 ರಂದು ದೇವಸ್ಥಾನದಲ್ಲಿ ತಿರುಪ್ಪಾವಡೆ ಸೇವೆ ಹಾಗೂ ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 4 ರಿಂದ 6 ಗಂಟೆಯವರೆಗೆ ಮಧುಗಿರಿ ತಾಲೂಕು ಬಡವನಹಳ್ಳಿ ಗ್ರಾಮದ ಶ್ರೀ ರಂಗನಾಥಪ್ಪ ಮತ್ತು ಮಕ್ಕಳಿಂದ ಭೂತನ ಸೇವೆ (ಭೂತರಾಜ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
20 ಸಾವಿರ ಲಾಡು ವಿತರಣೆ: ವೈಕುಂಠ ಏಕಾದಶಿ ಅಂಗವಾಗಿ ದೇವಾಲಯದ ಆವರಣದ ಸುತ್ತ ಮತ್ತು ಮೇಲ್ಬಾಗದಲ್ಲಿ ವಿಷ್ಣುವಿನ ದಶ ಅವತಾರವೂ ಸೇರಿದಂತೆ ನವಗ್ರಹ ಇತರೆ ವಿವಿಧ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂರು ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ದೇವಾಲಯದ ಹಿನ್ನೆಲೆ: ಸುಮಾರು ಏಳು ನೂರು ವರ್ಷಗಳ ಹಿಂದೆ ಚೋಳರು ದೇವಾಲಯ ನಿರ್ಮಿಸಿದರು ಎನ್ನಲಾಗಿದೆ. ಅಂದು ಉತ್ತಮವಾಗಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳು ಬಳಿಕ ಸ್ಥಗಿತಗೊಂಡಿದ್ದವು. ನಂತರ ಇಲ್ಲಿನ ನಾಗರಿಕರು ದೇವಾಲಯದ ಟ್ರಸ್ಟ್ ಮೂಲಕ ಕಳೆದ 20 ವರ್ಷಗಳಿಂದ ಪೂಜೆ ಪುರಸ್ಕಾರಗಳನ್ನು ನೆರವೇರಿಸುತ್ತಿದ್ದಾರೆ.
ಗೋಷ್ಠಿಯಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ್, ವಕೀಲ ಲಕ್ಷ್ಮಣ್, ಗೋಪಿ ಅರಸ್, ಶಾಣೇಗೌಡ, ವೆಂಕಟೇಶ್ ಬಾಬು, ಸತೀಶ್, ಮಾರುತಿ (ಎಲೆಗೌಡ), ಗಾಯತ್ರಿ ಸುರೇಶ್, ವೆಂಕಟಾಚಲಯ್ಯ, ವೆಂಕಟೇಶ್, ಪುರುಷೋತ್ತಮ್ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


