ಹಿರಿಯೂರು: ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಕುವೆಂಪುರವರು ಬರೆಯದ ಸಾಹಿತ್ಯವಿಲ್ಲ, ಸಮಾಜದ ಎಲ್ಲಾ ವಿಷಯಗಳ ಕುರಿತಂತೆ ತಮ್ಮದೇ ಆದ ಅದ್ಭುತ ಶೈಲಿ ಹಾಗೂ ವೈಚಾರಿಕ ಹಿನ್ನೆಲೆಯಲ್ಲಿ ಕಥೆ-ಕಾವ್ಯ-ಕಾದಂಬರಿಗಳನ್ನು ರಚಿಸುವ ಮೂಲಕ ಕುವೆಂಪುರವರು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಎಂಬುದಾಗಿ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಡಿ.ಧರಣೇಂದ್ರಯ್ಯ ಹೇಳಿದರು.
ಹಿರಿಯೂರು ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ಕುವೆಂಪುರವರ 116 ನೇ ಜನ್ಮ ದಿನಾಚರಣೆಯಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರು ಮಾತನಾಡಿದರು.
ಇಂದಿನ ಯುವಜನತೆ ಜಡತ್ವದಿಂದ ಹೊರಬಂದು ಕ್ರಿಯಾಶೀಲತೆಯಿಂದ ಕೂಡಿದವರಾಗಿ ಕುವೆಂಪುರವರ ವೈಚಾರಿಕತೆ ವಿಚಾರಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಮಾಡಬೇಕಲ್ಲದೆ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಮನಸ್ಸಿನ ಅಂಧಕಾರವನ್ನು ಅಳಿಸಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಆರ್.ಪುಷ್ಪಲತಾ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಕುವೆಂಪುರವರ ದಿನಾಚರಣೆಯನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲು ಆದೇಶಿಸಿರುವುದು ಶ್ಲಾಘನೀಯ ಎಂದರಲ್ಲದೆ, ಜನರು ಗುಡಿ, ಚರ್ಚು ಮಸೀದಿಗಳಿಂದ ಹೊರಬನ್ನಿ ಎಂಬ ಸಂದೇಶ ನೀಡುವ ಮೂಲಕ ಕನ್ನಡ ನೆಲ, ಜಲ, ಭಾಷೆಗಳ ಬಗ್ಗೆ ಹಲವು ಹೋರಾಟಗಳನ್ನು ಮಾಡಿದ್ದಾರೆ ಎಂಬುದಾಗಿ ತಿಳಿಸಿದರು.
ಸಹ ಪ್ರಾಧ್ಯಾಪಕರಾದ ಸಿದ್ಧಲಿಂಗಯ್ಯ ಮಾತನಾಡಿ, ಕುವೆಂಪುರವರ ಕೃತಿಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ, ಇವರ ಆದರ್ಶಗಳು ಇಂದಿನ ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಐಕ್ಯೂಎಸಿ ಹೆಚ್.ತಿಪ್ಪೇಸ್ವಾಮಿ ಮಾತನಾಡಿ, ಕುವೆಂಪುರವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ವಿಚಾರಧಾರೆಗಳು ಭೂಮಿಯ ಮೇಲೆ ಎಂದೆಂದಿಗೂ ಅಮರ, ಅವರ ಕೃತಿಗಳು ಸಮಾಜವನ್ನು ತಿದ್ದುವಲ್ಲಿ ಅಸ್ತ್ರಗಳಾದವು ಎಂಬುದಾಗಿ ತಿಳಿಸಿದರು .
ಆರಂಭದಲ್ಲಿ ಕುಮಾರಿ ರಂಗಮ್ಮ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ಬಿ.ಇ.ಜಗನ್ನಾಥ್ ಸ್ವಾಗತಿಸಿ, ಸಹ ಪ್ರಾಧ್ಯಾಪಕರಾದ ಟಿ.ಬಸವರಾಜ್ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕರಾದ ಕೆ.ಎಚ್. ಮಹಂತೇಶ್ ವಂದಿಸಿದರು.
ಈ ಕಾರ್ಯಕ್ರಮದಲ್ಲಿ , ಸಹ ಪ್ರಾಧ್ಯಾಪಕರುಗಳಾದ ಡಾ.ಗಿರೀಶ್ ನಾಯಕ, ಎ.ಆರ್.ಶಿವರಾಜು, ಗ್ರಂಥಪಾಲಕರಾದ ಡಾ.ರಾಘವೇಂದ್ರ, ಜಿ.ಎಸ್.ರಾಮಪ್ಪ, ವಿ.ಪಿ.ಜನಾರ್ದನ್, ಬಿ.ಕುಮಾರ್, ಕೆ.ಮುರುವರ್ಧನ್, ಎಸ್. ಎಲ್.ಎನ್. ಶ್ರೀಮೂರ್ತಿ, ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy