ತುಮಕೂರು: ಜಿಲ್ಲೆ ಪಾವಗಡ ತಾಲ್ಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಚರ್ಚ್ ಉದ್ಘಾಟನೆಗೆ ಗ್ರಾಮಸ್ಥರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಕೆ.ವಿ. ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಸಾರ್ವಜನಿಕರೊಂದಿಗೆ ಚರ್ಚಿಸಿದರು.
ಎಸ್.ಪಿ. ಅಶೋಕ್ ಮಾತನಾಡಿ, “ಗ್ರಾಮೀಣ ಭಾಗದ ಜನರು ಕಾನೂನಿನ ಕುರಿತು ಅರಿವಿರಬೇಕು. ಯಾವುದೇ ಸಮಸ್ಯೆ ಎದುರಾದಾಗ 112 ಸಹಾಯವಾಣಿಗೆ ಕರೆ ಮಾಡಿದರೆ, ಪೊಲೀಸರು ತಕ್ಷಣವೇ ಸ್ಥಳಕ್ಕೆ ಬಂದು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿಯನ್ನು ಕಾಪಾಡಲು ಸಹಕರಿಸಬೇಕು” ಎಂದು ತಿಳಿಸಿದರು. ಅವರು ಗ್ರಾಮಸ್ಥರಿಂದ ಚರ್ಚ್ ಕುರಿತ ಮಾಹಿತಿ ಸಂಗ್ರಹಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ, “ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಜನರಲ್ಲಿ ಕಾನೂನು ಜಾಗೃತಿ ಮೂಡಿಸಲಾಗುವುದು. ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ಪೊಲೀಸರ ನೆರವು ಪಡೆಯಬೇಕು, ಕಾನೂನು ಕೈಗೆ ತೆಗೆದುಕೊಳ್ಳಬಾರದು” ಎಂದು ಎಸ್.ಪಿ. ತಿಳಿಸಿದರು.
ಶಾಂತಿ ಸಭೆಯಲ್ಲಿ ಮಧುಗಿರಿ ಡಿವೈಎಸ್ ಪಿ ಮಂಜುನಾಥ್, ಪಾವಗಡ ಗ್ರಾಮಾಂತರ ಸಿಪಿಐ ಗಿರೀಶ್, ಪಿಎಸ್ಐ ಲಕ್ಷ್ಮಣ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4