ಕೊರಟಗೆರೆ: ತಾಲ್ಲೂಕಿನ ಸಮಸ್ತ ಆಡಳಿತದ ಕೇಂದ್ರಬಿಂದುವಾಗಿರುವ ಕೊರಟಗೆರೆ ಮಿನಿ ವಿಧಾನಸೌಧವು ಸರಿಯಾದ ನಿರ್ವಹಣೆಯಿಲ್ಲದೆ ಕೇವಲ 15 ವರ್ಷಗಳಲ್ಲೇ ಶಿಥಿಲಾವಸ್ಥೆ ತಲುಪಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
2013ರಲ್ಲಿ ಉದ್ಘಾಟನೆಗೊಂಡ ಈ ಭವ್ಯ ಕಟ್ಟಡವು ಈಗ ಬಿರುಕು ಬಿಟ್ಟಿದೆ. ಮಳೆ ಬಂದಾಗ ಛಾವಣಿ ಹಾಗೂ ಗೋಡೆಗಳಿಂದ ನೀರು ಸೋರುತ್ತಿದ್ದು, ಕಚೇರಿ ಕೆಲಸಗಳಿಗೆ ಅಡ್ಡಿಯಾಗುತ್ತಿದೆ.
ಸಾರ್ವಜನಿಕ ಶೌಚಾಲಯಗಳು ಸಮರ್ಪಕವಾಗಿಲ್ಲ. ಕಟ್ಟಡದಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ದೂರದ ಗ್ರಾಮಗಳಿಂದ ಬರುವ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊರಗಿನ ಶೌಚಾಲಯವೂ ಬಳಕೆಯಾಗದೆ ಹಾಳಾಗಿದೆ.
ತಹಶೀಲ್ದಾರ್ ನ್ಯಾಯಾಲಯದ ಕೋಣೆ ಸೇರಿದಂತೆ ಕಚೇರಿಯ ಹಲವು ಭಾಗಗಳಲ್ಲಿ ವಿದ್ಯುತ್ ಸ್ವಿಚ್ ಬೋರ್ಡ್‌ಗಳು ಒಡೆದು ಹೋಗಿವೆ. ಇದು ಸಿಬ್ಬಂದಿ ಮತ್ತು ಸಾರ್ವಜನಿಕರ ಸುರಕ್ಷತೆಗೆ ಆತಂಕ ತಂದೊಡ್ಡಿದೆ.
ಕಚೇರಿ ಆವರಣದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಜನರು ನೀರಿಗಾಗಿ ಪರದಾಡುವಂತಾಗಿದೆ.
ತಾಲ್ಲೂಕು ಆಡಳಿತದ ಈ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕಟ್ಟಡದ ದುರಸ್ತಿ ಕೈಗೊಂಡು ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


