ಪಕ್ಷ, ಜಾತಿ, ಗಡಿಗಳ ಎಲ್ಲೆ ಮೀರಿ ರಾಜ್ಯದಲ್ಲಿ ಬೆಳೆಯುತ್ತಿರುವ ಅಪರೂಪದ ನಾಯಕಿ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳಕರ್. ಅವರ ನಡೆ, ನುಡಿ, ಚಾಣಾಕ್ಷತನ, ಅಭಿವೃದ್ಧಿ, ಎಲ್ಲರೊಂದಿಗಿನ ಸೌಹಾರ್ದಯುತ ಸಂಬಂಧಗಳನ್ನು ನೋಡಿದಾಗ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಗಡಿ ಮೀರಿ ಎಲ್ಲರೂ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ನೆಚ್ಚಿಕೊಳ್ಳುತ್ತಾರೆ, ಪ್ರಶಂಸೆ ವ್ಯಕ್ತಪಡಿಸುತ್ತಾರೆ.
ಲಕ್ಷ್ಮಿ ಹೆಬ್ಬಾಳಕರ್ ಏಕಾ ಏಕಿ ಬೆಳೆದು ನಿಂತ ನಾಯಕಿಯಲ್ಲ. ನಾಯಕತ್ವ ಬೆಳೆಸಿಕೊಂಡಿರುವುದರ ಹಿಂದೆ ಸಾಕಷ್ಟು ಶ್ರಮವಿದೆ, ಹಿಡಿದ ಕೆಲಸ ಬಿಡದೆ ಸಾಧಿಸುವ ಛಲ ಅವರಲ್ಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣವಿದೆ. ತಮಗೆ ಅವಮಾನ ಮಾಡಿದವರಿಗೆ ಸಾಧನೆಯ ಮೂಲಕ ಉತ್ತರಿಸುವ ಜಾಣ್ಮೆ ಇದೆ. ಅನಗತ್ಯವಾಗಿ ಯಾರ ತಂಟೆಗೂ ಹೋಗದ, ಎಲ್ಲರನ್ನೂ ಗೌರವದಿಂದ ಕಾಣುವ ಅವರು ತಮ್ಮ ದಾರಿಗೆ ಅಡ್ಡ ಬರುವವರನ್ನು ಸುಮ್ಮನೆ ಬಿಡುವ ಜಾಯಮಾನದವರಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ ಸಂದರ್ಭದಲ್ಲಿ ಹತಾಶರಾಗದೆ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಸಿದವರು, ಪಕ್ಷ ಮತ್ತೆ ಪುಟಿದೇಳುವಂತೆ ಮಾಡಿದವರು ಲಕ್ಷ್ಮಿ ಹೆಬ್ಬಾಳಕರ್. ಬಿಜೆಪಿ ಪ್ರಬಲವಾಗಿರುವ ಜಿಲ್ಲೆಯಲ್ಲಿ ಒನ್ ವುಮೆನ್ ಆರ್ಮಿಯಂತೆ ಕೆಲಸ ಮಾಡಿ ಕಾಂಗ್ರೆಸ್ ಪಕ್ಷ ಧೂಳು ಕೊಡವಿ ಮೇಲೇಳುವಂತೆ ಮಾಡಿದವರು. ಬೆಂಗಳೂರು ಬಿಟ್ಟರೆ ಬೆಳಗಾವಿಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿಯಾದ ಸ್ಥಾನ ಸಿಗುವ ರೀತಿಯಲ್ಲಿ ಬೆಳೆಸಿದರು.
ಮಹಿಳಾ ಕಾಂಗ್ರೆಸ್ ಎಂದರೆ ಮೂಗು ಮುರಿಯುವ ಸನ್ನಿವೇಶದಲ್ಲೂ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ, ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಘಟಕವನ್ನು ಹೇಗೆ ಕಟ್ಟಿ ಬೆಳೆಸಬಹುದು ಎಂದು ತೋರಿಸಿದರು.
ತಾವು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮಾದರಿಯಾಗಿ ಕೆಲಸ ಮಾಡಿ ತೋರಿಸಿದ್ದಾರೆ ಲಕ್ಷ್ಮೀ ಹೆಬ್ಬಾಳಕರ್. ವಿರೋಧಿಗಳ ಬಗ್ಗೆ, ಅನಗತ್ಯ ರಾಜಕೀಯ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವಿಶ್ರಾಂತವಾಗಿ ಕೆಲಸ ಮಾಡಿದ್ದಾರೆ. ಪ್ರವಾಹ, ಕೊರೋನಾದತಂಹ ಪ್ರಕೃತಿ ವಿಕೋಪಗಳ ಅಟ್ಟಹಾಸದ ಮಧ್ಯೆಯೂ ಎದೆಗುಂದದೆ, ರಾಜ್ಯದಲ್ಲಿ ಯಾವ ಪಕ್ಷದ ಆಡಳಿತವಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾವಿರಾರು ಕೋಟಿ ರೂ.ಗಳ ಕೆಲಸವನ್ನು ತಂದು ಕ್ಷೇತ್ರದ ಮನೆಯ ಮಗಳಾಗಿ ಪ್ರೀತಿ ಗಳಿಸಿದರು.
ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಚನ್ನರಾಜ ಹಟ್ಟಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಅರ್ಜುನನ ಬಾಣದ ಗುರಿ ಪಕ್ಷಿಯ ಕಣ್ಣಿನಲ್ಲಿ ನೆಟ್ಟಂತೆ ಕಾಂಗ್ರೆಸ್ ಅಭ್ಯರ್ಥಿಯ ಗೆಲವೊಂದೇ ತಮ್ಮ ಗುರಿ ಎಂದು ಹಗಲು, ರಾತ್ರಿ ಶಕ್ತಿ, ಯುಕ್ತಿಯನ್ನು ಬಳಸಿ ಗೆಲುವನ್ನು ಸಾಧಿಸಿ ತೋರಿಸಿದರು. ಸವಾಲೆಸೆದವರಿಗೆಲ್ಲ ಮಣ್ಣು ಮುಕ್ಕಿಸಿದರು. ತನ್ಮೂಲಕ ಅಭಿವೃದ್ಧಿ ಕೆಲಸಗಳಿಗೆ ತಮ್ಮ 2 ಕೈಗಳಿಗೆ ಮತ್ತೆರಡು ಕೈಗಳನ್ನು ಸೆರಿಸಿಕೊಂಡರು.
ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದಲ್ಲಿ ಲಿಂಗಾಯತ ನಾಯಕಿಯಾಗಿ ಬೆಳೆದಿದ್ದಾರೆ. ಹಾಗಂತ ತೀರಾ ಜಾತೀಯ ವಾದಿಯಾಗದೆ, ಸರ್ವ ಜನಾಂಗದ ಪ್ರೀತಿಯನ್ನೂ ಗಳಿಸಿಕೊಂಡಿದ್ದಾರೆ. ಹಲವು ಮಠಾಧೀಶರ ಒಲವು ಬಿಜೆಪಿ ಕಡೆಗಿದ್ದರೂ ಲಕ್ಷ್ಮೀ ಹೆಬ್ಬಾಳಕರ್ ವಿಷಯ ಬಂದಾಗ ಅವೆಲ್ಲ ಗೌಣವಾಗುತ್ತವೆ. ಎಲ್ಲರೂ ‘ಅವರು ನಮ್ಮವರು’ ಎನ್ನುವ ಮನೋಭಾವ ಮೂಡುವಂತೆ ಕೆಲಸ ಮಾಡುತ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್ ಕೇವಲ ರಾಜಕೀಯವಾಗಿ ಮಾತ್ರ ಬೆಳೆದು ನಿಂತಿಲ್ಲ. ಸಾಮಾಜಿಕ ಮುಂದಾಳುವಾಗಿದ್ದಾರೆ, ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳನ್ನು ಕಟ್ಟಿ ನಿಲ್ಲಿಸಿದ್ದಾರೆ. ರಿಯಲ್ ಎಸ್ಟೇಟ್ ನಲ್ಲೂ ಛಾಪು ಮೂಡಿಸಿದ್ದಾರೆ. ಸಹಕಾರಿ ಸಂಘ ಕಟ್ಟಿ ಬೆಳೆಸುತ್ತಿದ್ದಾರೆ. ಕ್ಷೇತ್ರದ ಜನರ ಆರೋಗ್ಯಕ್ಕೆ ಬೆಂಬಲವಾಗಿ ನಿಲ್ಲಲು ಆಸ್ಪತ್ರೆಯೊದನ್ನು ಕಟ್ಟುವ ಬೃಹತ್ ಯೋಜನೆಯನ್ನು ಹೊಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


