ಸರಗೂರು: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ಬಿ. ಗವಾಯಿ ಮೇಲೆ ವಕೀಲನೊಬ್ಬ ಶೂ ಎಸೆದಿರುವ ಘಟನೆ ತೀವ್ರ ಖಂಡನೀಯವಾಗಿದೆ ಎಂದು ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಕಿಡಿಕಾರಿದ್ದರು.
ಪಟ್ಟಣದ ತಹಶೀಲ್ದಾರ್ ಮೋಹನಕುಮಾರಿರವರಿಗೆ ದಸಂಸ (ಅಂಬೇಡ್ಕರ್ ವಾದ) ವತಿಯಿಂದ ಬುಧವಾರದಂದು ಮನವಿ ಸಲ್ಲಿಸಿ ಮಾತನಾಡಿದರು.
ತಹಶೀಲ್ದಾರ್ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಈ ಘಟನೆ ಸಂಬಂಧ ಪತ್ರ ಬರೆದಿದ್ದು,ರಾಷ್ಟ್ರದ ಅತ್ಯುನ್ನತ ಸ್ಥಾನದಲ್ಲಿರುವ ಮುಖ್ಯ ನ್ಯಾಯಮೂರ್ತಿಗಳಿಗೆ ಅವಮಾನ ಮಾಡುವುದು ದೇಶಕ್ಕೆ ಅವಮಾನಿಸಿದಂತೆ, ಈ ಘಟನೆಗೆ ಕಾರಣನಾದ ವಕೀಲನ ಮೇಲೆ ದೇಶದ್ರೋಹ ಕೇಸ್ ದಾಖಲಿಸಿ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾರತದ ಜಾತಿ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಂದರೆ, ಯಾರು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆ ಇಟ್ಟಿರುತ್ತಾರೋ ಅವರೆಲ್ಲರನ್ನು ಈ ಸನಾತನವಾದಿಗಳು ತಮ್ಮ ವಿರೋಧಿಗಳಂತೆ ಕಾಣುತ್ತಾರೆ ಅವರು ರಾಷ್ಟ್ರಪತಿಗಳೇ ಆಗಿರಲಿ. ಮುಖ್ಯ ನ್ಯಾಯಮೂರ್ತಿಗಳೇ ಆಗಿರಲಿ ಸಂವಿಧಾನ ಜಾರಿಯಾದ 75 ವರ್ಷಗಳ ನಂತರವೂ ಈ ದೇಶದ ಜಾತಿವಾದಿ ಮನಸ್ಸುಗಳು ತಮ್ಮ ಜಾತಿ ಮೂಲದ ಅಸಮಾನತೆ ಮತ್ತು ಅಸಹನೆಯನ್ನು ತಮ್ಮ ಮನಸ್ಸಿನಲ್ಲಿ ಇನ್ನೂ ಭದ್ರವಾಗಿ ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಈ ಘಟನೆ ಹಿಂದಿರುವ ಶಕ್ತಿಯನ್ನು ಪತ್ತೆ ಹಚ್ಚಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯಿಸಿ ಕ್ರಮ ಕೈಗೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮೋಹನಕುಮಾರಿರವರು ನಿಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ರವಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್ ಡಿ ಸಣ್ಣಸ್ವಾಮಿ, ಕೂಲ್ಯ ಮಹದೇವಸ್ವಾಮಿ, ಗ್ರಾಪಂ ಸದಸ್ಯ ಎಚ್ ಡಿ ಮಹೇಶ್, ಹಾದನೂರು ಬಸವಣ್ಣ, ಸೋಮೇಶ್, ಮಹಿಳಾ ಘಟಕದ ಶೀರಮ್ಮ ಮುಂತಾದವರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC