ತಿಪಟೂರು: ನಗರದ ಹೊರವಲಯದ ಗಾಂಧಿನಗರದ ಬಳಿ ಇರುವ ಕೃಷ್ಣಮೂರ್ತಿ ಎಂಬುವವರಿಗೆ ಸೇರಿದ ತೋಟದ ಬಾವಿಯೊಂದಕ್ಕೆ ಇಂದು ಬೆಳಗ್ಗೆ ಚಿರತೆ ಬಿದ್ದಿರುವ ಘಟನೆ ನಡೆದಿದೆ.
ಶನಿವಾರ ಬೆಳಿಗ್ಗೆ ತೋಟದ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾವಿಯೊಳಗೆ ಚಿರತೆ ಬಿದ್ದಿರುವುದು ಪತ್ತೆಯಾಗಿದೆ. ಬಾವಿಯೊಳಗೆ ಬಿದ್ದಿರುವ ಚಿರತೆಯನ್ನು ಕಂಡು ಸ್ಥಳೀಯರು ಮತ್ತು ತೋಟದ ಮಾಲೀಕರು ಆತಂಕಕ್ಕೊಳಗಾಗಿದ್ದಾರೆ. ಚಿರತೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಚಿರತೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಮಾಹಿತಿ ನೀಡಿ ಹಲವು ಗಂಟೆಗಳಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಮಧ್ಯಾಹ್ನವಾದರೂ ಚಿರತೆಯನ್ನು ರಕ್ಷಿಸುವ ಅಥವಾ ಹಿಡಿಯುವ ಕಾರ್ಯಾಚರಣೆ ಆರಂಭಿಸದ ಕಾರಣ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿರತೆ ಬಾವಿಯಿಂದ ಮೇಲೆ ಬಂದರೆ ಅಪಾಯ ಸಂಭವಿಸಬಹುದು ಎಂಬ ಭೀತಿಯಲ್ಲಿರುವ ಜನರು, ಕೂಡಲೇ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


