ತುಮಕೂರು: ಕಾನೂನು ಮತ್ತು ಕಾಯ್ದೆಗಳ ಮಾಹಿತಿ ತಿಳಿದಿದ್ದರೆ, ಅದನ್ನು ಆಯುಧವನ್ನಾಗಿ ಬಳಸಿಕೊಂಡು ಸಮಾಜದಲ್ಲಿ ಘಟಿಸುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ವರದಕ್ಷಿಣೆ ವಿರೋಧಿ ವೇದಿಕೆಯ ಉಪಾಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗವು ಜಿಲ್ಲಾ ವರದಕ್ಷಿಣೆ ವಿರೋಧಿ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ಯಲ್ಲಿ ಮಾತನಾಡಿದರು.
ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಇರುವ ಆಯುಧವೆಂದರೆ ಮಾಹಿತಿ ಮತ್ತುಜ್ಞಾನ ಸಂಪಾದನೆ. ಈಗಾಗಲೇ ನಡೆದಿರುವ ಅನಾಹುತಗಳಿಗೆ ಪರಿಹಾರವನ್ನು ಕಾನೂನಿನ ಅರಿವಿನ ಮೂಲಕ ಪಡೆಯಬಹುದು ಎಂದರು.
ಜಿಲ್ಲಾ ವರದಕ್ಷಿಣೆ ವಿರೋಧಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಸರ್ಕಾರ ಗಮನಹರಿಸಬೇಕು. ಕಾರ್ಮಿಕರ ಕಾನೂನುಗಳ ಬಗ್ಗೆ ಹೆಚ್ಚುಒತ್ತು ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಮಾನವಹಕ್ಕುಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ನಕಾರಾತ್ಮಕವಾಗಿ ಬಳಸಿಕೊಂಡು ಸಮಾಜವನ್ನು ಹಾಳು ಮಾಡಬಾರದು ಎಂದು ತಿಳಿಸಿದರು.
ಸೋಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್. ‘ಮಾನವ ಹಕ್ಕುಗಳ ಪ್ರಸ್ತುತತೆ’ ಕುರಿತು, ವಿವಿ ಕಲಾ ಕಾಲೇಜಿನ ಇಂಗ್ಲಿಷ್ ಅಧ್ಯಯನ ವಿಭಾಗ ಹಾಗೂ ಮನಃಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಜಿ.ದಾಕ್ಷಾಯಣಿ ‘ಮಹಿಳೆಯರು ಮತ್ತು ಮಕ್ಕಳ ಮಾನವಹಕ್ಕು ಉಲ್ಲಂಘನೆ’ ಕುರಿತು ಮಾತನಾಡಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಡಾ.ಗಿರಿಜಾ ಕೆ. ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx