ಈಗ ನಾವು ಒಮ್ಮೆ ಕಲ್ಪಿಸಿಕೊಳ್ಳೋಣ, ನಾವು ಈ ಭೂಮಿಯ ಮೇಲೆ ಸುಮಾರು 1 ಸಾವಿರ ವರ್ಷ ಮುಂದೆ ಹೋಗಿದ್ದೇವೆಂದು ಆಗ ಈ ಜಗತ್ತು ಹೇಗಿರಬಹುದು? ಆಗ ಮನುಷ್ಯ ತಂತ್ರಜ್ಞಾನ ವಿಷಯದಲ್ಲಿ ವಿಪರೀತ ಮುಂದುವರೆದು ಯಾವುದಕ್ಕೂ ಕೊರತೆ ಇರದ ಜಗತ್ತಿನಲ್ಲಿ ಜೀವಿಸುತ್ತಿದ್ದಾನೆ ಎಂಬುದಾಗಿಯೇ? ಒಂದು ರೀತಿಯ ಸ್ವರ್ಗ ಜೀವನದ ಹಾಗೆ? ಹಾಗೆಯೇ ಮಂಗಳ ಮತ್ತು ನಮ್ಮ ಉಪಗ್ರಹ ಚಂದ್ರನ ಮೇಲೆ ಮನುಷ್ಯ ವಸಾಹತು ಹಾಕಿ ಅಲ್ಲಿಯೂ ವಾಸಿಸುತ್ತಿರುತ್ತಾನೆ ಎಂಬುದಾಗಿಯೇ? ಇಂತಹ ಸಂಗತಿಗಳನ್ನು ನಾವು ಭವಿಷ್ಯದಲ್ಲಿ ನಿಜವಾಗಬಹುದು ಎಂದು ಹೇಗೆ ಅಂದುಕೊಳ್ಳುತ್ತೇವೆಯೋ ಹಾಗೆಯೇ ಇವೆಲ್ಲವೂ ಯಾವುದೂ ಸಾಧ್ಯವಾಗದೆ ಕೇವಲ ಕಲ್ಪನೆ ಅಥವಾ ಕನಸೂ ಆಗಬಹುದು ಎಂಬ ಸತ್ಯವನ್ನು ಮೊದಲು ತಿಳಿಯಬೇಕಾಗುತ್ತದೆ. ಇದು ಹೇಗೆಂದು ತಿಳಿಯುವ ಪ್ರಯತ್ನ ಮಾಡಿದರೆ ನಮಗೇ ಒಂದೊಂದು ತಿಳಿಯುತ್ತಾ ಹೋಗುತ್ತದೆ ಆದರೆ ಸ್ವಲ್ಪ ಆಳವಾಗಿ ಯೋಚಿಸಬೇಕು ಅಷ್ಟೇ.
ಮೊದಲನೆಯದಾಗಿ, ನಮ್ಮ ಮುಂದಿರುವ ಈಗಿರುವ ಜಗತ್ತನ್ನು ಒಮ್ಮೆ ಅವಲೋಕಿಸಿ ನೋಡಿ, ಪ್ರಪಂಚದ ಎಲ್ಲಿಯಾದರೂ ಒಂದು ಕಡೆ ಅಥವಾ ಹಲವು ಕಡೆ, ಹಲವು ವರ್ಷಗಳಿಂದ ನಡೆಯುತ್ತಿರುವ ದೇಶ ದೇಶಗಳ ನಡುವಿನ ನಿಲ್ಲದ ಯುದ್ಧ, ಭಯಂಕರ ಯುದ್ಧಗಳಿಂದ ನಗರ ನಾಶ, ನಗರ ಕಟ್ಟಲು ಕಾರಣವಾದ ಪುನರುತ್ಪಾದಿಸಲಾಗದ ಹಲವು ಸಂಪನ್ಮೂಲಗಳ ನಾಶ, ಇಲ್ಲಿ ನಾಶ ಎಂದರೆ ಕೇವಲ ಕಟ್ಟಡ ಒಂದೇ ಅಲ್ಲ, ಅದು ಬೃಹತ್ ಸೇತುವೆ ಆಗಿರಬಹದು, ವಿದ್ಯುತ್ ಉತ್ಪಾದನಾ ಘಟಕ, ತೈಲ ಸಂಗ್ರಹ ಘಟಕ, ಬೃಹತ್ ಕಾರ್ಖಾನೆಗಳು, ತೈಲ ಉತ್ಪಾದನಾ ಬಾವಿಗಳು, ಕ್ಷಿಪಣಿ ಯಂತಹ ಯುದ್ಧ ಸಾಮಗ್ರಿಗಳ ಸಂಗ್ರಹ, ವಾಹನಗಳು, ಡ್ಯಾಂ, ಹೀಗೆ ಹತ್ತು ಹಲವು ಒಮ್ಮೆಲೇ ನಾಶವಾದರೆ, ಮತ್ತೊಮ್ಮೆ ಪ್ರಕೃತಿಯೇ ಮುನಿದು ಅಂದರೆ ಭೂಕಂಪ, ಸುನಾಮಿ, ಪ್ರವಾಹ ಘಟಿಸಿ ಮತ್ತೆ ಅದೇ ಸರ್ವ ನಾಶ, ಪ್ರಕೃತಿ ಒಳ್ಳೆಯದು ಕೆಟ್ಟದ್ದು ಯಾವುದನ್ನೂ ನೋಡದೆ ಎಲ್ಲವನ್ನು ತನ್ನಲ್ಲಿ ಲೀನಗೊಳಿಸಿಕೊಂಡುಬಿಡುತ್ತದೆ. ಬಹಳ ಹಿಂದೆ ಇರಾಕ್ ಅಮೆರಿಕ ಯುದ್ಧದ ಸಂದರ್ಭದಲ್ಲಿ ಇರಾಕ್ ಅಧ್ಯಕರು (ಸದ್ಧಾಂಹುಸೇನ್) ತಮ್ಮ ದೇಶದ ಎಣ್ಣೆ ಬಾವಿಗಳಿಗೆ ತಾವೇ ಕ್ಷಿಪಣಿ ದಾಳಿ ಮಾಡಿಸಿಬಿಟ್ಟರು, ಅಮೆರಿಕಾಕ್ಕೆ ಏನು ಸಿಗುವುದು ಬೇಡ ಎಂದು, ಎಣ್ಣೆ ಬಾವಿಗಳು ವರ್ಷಾನು ಗಟ್ಟೆ ಬೆಂಕಿಯಿಂದ ಹೊತ್ತಿ ಉರಿಯಿತು ಇದರಿಂದ ಅದಷ್ಟು ವರ್ಷಗಳಿಗೆ ಆಗುವಷ್ಟು ತೈಲ ಭಸ್ಮವಾಗಿರಬೇಕು?
ಮೊನ್ನೆ ರಷ್ಯಾ ಉಕ್ರೇನಿನ ಎಣ್ಣೆ ಸಂಗ್ರಹಾರಕ್ಕೆ ಕ್ಷಿಪಣಿ ದಾಳಿ ನಡೆಸಿ ನಾಶಪಡಿಸಿತು. ಇದರ ಜೊತೆಗೆ ಕೆಲವೊಮ್ಮೆ ನಮ್ಮ ದೇಶವೂ ಸೇರಿದಂತೆ ಹಲವು ದೇಶಗಳಲ್ಲಿ ಹಲವು ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ತೈಲ ಸಂಗ್ರಹ ಘಟಕಕ್ಕೆ ಅಥವಾ ತೈಲ ಭೂಮಿಯಿಂದ ಹೊರ ತೆಗೆಯುವಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ನಾಶವಾಗಿರುವ ಸಂಗತಿ ನೋಡಿರುತ್ತೇವೆ. ಇವೆಲ್ಲವೂ ನಾಶ ಅಷ್ಟೇ ಮತ್ತೆ ತರಲು ಸಾಧ್ಯವಿಲ್ಲ. ಹೀಗೆಯೇ ಮುಂದೆ ಒಂದು ದಿನ ತೈಲ ಸಂಪನ್ಮೂಲ ಸಂಪೂರ್ಣ ಮುಗಿದು ಹೋಯಿತು ಎಂದು ಕಲ್ಪಿಸಿಕೊಳ್ಳಿ, ಆಗ ಏನಾಗಬಹುದು? ಜನಸಾಮಾನ್ಯರು ಮತ್ತು ಶ್ರೀಮಂತರಿಂದ ಹಿಡಿದು ಸರ್ಕಾರ ನಡೆಸುತ್ತಿರುವವರ ನಿತ್ಯ ಬದುಕಿಗೆ ಅಗತ್ಯವಿರುವ ತೈಲ ಅವಲಂಬಿ ವಾಹನ ಉಪಯೋಗಕ್ಕೆ ಬಾರದ ವಸ್ತುವಾಗಿಬಿಡುತ್ತದೆ. ವಿಮಾನ, ರಾಕೆಟ್ ಮೇಲೆ ಹಾರುವುದಿಲ್ಲ. ರಾಕೆಟ್ ಹಾರದ ಕಾರಣಕ್ಕೆ ಉಪಗ್ರಹ ಮೇಲೆ ಹಾರಿಸಲು ಸಾಧ್ಯವಾಗುವುದಿಲ್ಲ ಆಗ ಎಲ್ಲರೀತಿಯ ಸಂಪರ್ಕ ಕಡಿದುಹೋಗುತ್ತದೆ. ಮೊಬೈಲ್, ಟಿವಿ, ಇಂಟರ್ ನೆಟ್ ವ್ಯವಸ್ಥೆ ಎಲ್ಲ ಹಾಳಾಗಿ ಹೋಗುತ್ತದೆ. ಹೀಗೆಯೇ ಮುಂದುವರೆದು ಬಾಹ್ಯಾಕಾಶ ಉಪಗ್ರಹಳ ಸಹಾಯದಿಂದ ನಡೆಸಲಾಗುತ್ತಿದ್ದ ಹೊಸ ಗ್ರಹ ಅನ್ವೇಷಣೆ, ನಮ್ಮ ಸೌರವ್ಯೂಹ ಅಧ್ಯಯನ, ನಕ್ಷತ್ರ, ಗೆಲಾಕ್ಸಿ ಮತ್ತು ಬಾಹ್ಯಾಕಾಶಗಳ ಸಂಶೋಧನೆ ನಿಂತುಹೋಗುತ್ತದೆ. ಹೆಚ್ಚೆಂದರೆ ಇನ್ನೂ ಸುಸ್ಥಿತಿಯಲ್ಲಿ ಇರುವ ಉಪಗ್ರಹ ಇರುವಷ್ಟು ದಿನ ಅದರ ಸೇವೆ ಸಲ್ಲಿಸಿ ಅದರ ಆಯಸ್ಸು ಮುಗಿದ ನಂತರ ಅದೊಂದು ಅಂತರಿಕ್ಷ ಕಸವಾಗಿ ಬಿಡುತ್ತದೆ. ಇವೆಲ್ಲವನ್ನು ನಾವು ಈಗ ಇಂತಹ ಕಾಲದಲ್ಲಿ ಇದ್ದೇವೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ. ಇಂತಹ ಸಂದರ್ಭದಲ್ಲಿ ನಾವು ಸೌರ ಶಕ್ತಿ ಬಳಕೆಗೆ ಹೆಚ್ಚು ಆದ್ಯತೆ ನೀಡಿ ಎಲ್ಲದಕ್ಕೂ ಅದರಿಂದ ಉಪಯೋಗ ಪಡೆಯಬಹುದು ಎಂದು ಯೋಚಿಸಬಹುದು ಆದರೆ ಅದಕ್ಕೂ ಒಂದು ಇತಿಮಿತಿ ಇದೆ ಈ ಕೆಳಗೆ ಓದಿ:
ಎರಡನೆಯದಾಗಿ, ಭೂಮಿ ಏನು ಅಕ್ಷಯ ಪಾತ್ರೆ ಅಲ್ಲ ಎಂದು ತಿಳಿದಿದ್ದೇವೆ. ಮನುಷ್ಯ ಲೋಹಗಳ ಉಪಯೋಗ ತಿಳಿಯಲು ಪ್ರಾರಂಭಿಸಿದಾಗ ನಿಧಾನವಾಗಿ ಭೂಮಿ ಅಗೆಯಲು ಪ್ರಾರಂಭಿಸಿದ, ಅದಿರುಗಳನ್ನು ಹೊರ ತೆಗೆದು ಅದನ್ನು ಸಂಸ್ಕರಿಸಿ, ಲೋಹವಾಗಿ ಮಾಡಿ ಅದರಿಂದ ಸಾಕಷ್ಟು ಉಪಯೋಗ ಮಾಡಿಕೊಂಡ. ಶಿಲಾ ಯುಗದಿಂದ ಹಿಡಿದು ಸಾಕಷ್ಟು ವರ್ಷಗಳು ಕಳೆಯುತ್ತಾ, ಸಂಪನ್ಮೂಲಗಳ ಬಳಕೆ ಮಾಡುತ್ತಾ ನಿಧಾನವಾಗಿ ಇಂದಿನ ಆಧುನಿಕ ಯುಗವಾಗಿ ಮಾರ್ಪಡಿಸಿದ್ದು ಇಂತಹ ಅಮೂಲ್ಯ ಸಂಪನ್ಮೂಲ ಎಂಬುದನ್ನು ನಾವು ಮರೆಯಬಾರದು. ಎಲ್ಲಾ ಕ್ಷೇತ್ರಗಳಲ್ಲೂ ಸಂಪನ್ಮೂಲ ಪ್ರಾಮುಖ್ಯತೆ ಮತ್ತು ಅಗತ್ಯತೆ ಇದೆ. ಒಂದು ಊಟಮಾಡುವ ತಟ್ಟೆಯಿಂದ ಹಿಡಿದು ವಾಹನಗಳು, ಕಂಪ್ಯೂಟರ್, ವಿಮಾನ, ಕ್ಷಿಪಣಿ, ರಾಕೆಟ್, ಸ್ಯಾಟಲೈಟ್ ನಂತಹ ಸಾಧನಗಳವರೆವಿಗೆ ಸಂಪನ್ಮೂಲ ಕೊಡುಗೆ ಅಪಾರ ಇದೆ. ಇಂತಹ ಅಮೂಲ್ಯ ಸಂಪನ್ಮೂಲ ಗಳನ್ನೂ ಹೀಗೆಯೇ ನಾವು ಯಾವುದೇ ಇತಿ ಮಿತಿ ಇಲ್ಲದೆ ದಿನ ನಿತ್ಯ ಯತೇಚ್ಛ ಬಳಸುತ್ತಾ ಹೋದರೆ ಹಾಗು ಈಗ ಬಳಸುತ್ತಿರುವ ರೀತಿ ನೋಡಿದರೆ ಈಗಾಗಲೇ ನಮ್ಮ ಭೂಭಂಡಾರದಲ್ಲಿ 40-50% ಮುಗಿದಿರುವ ಸಾಧ್ಯತೆ ಇರುತ್ತದೆ ಎಂದುಕೊಳ್ಳಬಹುದು. ಆಧುನಿಕ ಯುಗದ ಕೈಗಾರಿಕಾ ಕ್ರಾಂತಿ ಶುರುವಾಗಿದ್ದು ಕೇವಲ 300 ವರ್ಷಗಳ ಹಿಂದೆ ಇರಬಹುದು, ಈಗಾಗಲೇ 40–50% ಲೋಹಗಳನ್ನು ಮುಗಿಸಿದ್ದೇವೆ ಎಂದುಕೊಂಡರೆ ಇನ್ನು ಮುಂದಿನ 500 ವರ್ಷಗಳಲ್ಲಿ ಎಲ್ಲವೂ ಮುಗಿದು ಹೋಗುವ ಸಾಧ್ಯತೆ ಇರುತ್ತದೆ ಅಲ್ಲವೇ? ಒಂದು ವೇಳೆ ಬಳಸಿದ ಅಥವ ಸವೆದ ಸಂಪನ್ಮೂಲ ಶೇಖರಿಸಿ ಮತ್ತೆ ಪುನರುತ್ಪನ್ನ ಮಾಡಿದರೆ ಅದು ಎಲ್ಲಿಯವರೆವಿಗೆ ಬರಬಹದು? ಹಾಗೆಯೇ ಪುನರುತ್ಪನ್ನ ಎಲ್ಲಿಯವರೆವಿಗೆ ಮಾಡಬಹುದು? ಪ್ರತಿ ಬಾರಿಯೂ ಸಂಪನ್ಮೂಲ ಕರಗಿಸಿದಾಗ ಸ್ವಲ್ಪ ಸ್ವಲ್ಪವಾಗಿ ಸಂಪನ್ಮೂಲ ಕರಗಿಹೋಗುತ್ತದೆ ಇದು “BURN LOSS” . ಇದರ ಜೊತೆಗೆ ನಾನು ಮೊದಲೇ ಹೇಳಿದಂತೆ ಯುದ್ಧದಿಂದ ಆಗುವ ನಾಶ. ಒಂದಲ್ಲಾ ಒಂದು ದಿನ ಎಲ್ಲ ಸಂಪನ್ಮೂಲ ಮುಗಿದು ಹೋದವು ಎಂದು ಯೋಚಿಸಿ ನೋಡಿ, ಯಾವುದಾದರೂ ಒಂದು ರಿಪೇರಿಗೆ ಒಂದು ತುಂಡು ಬೇಕಾದ ಸಂಪನ್ಮೂಲ ಇಲ್ಲ ಎಂದು ಭಾವಿಸಿ, ಹಾಗು ಇವೆಲ್ಲವನ್ನು ನಾವು ಈಗ ಇಂತಹ ಕಾಲದಲ್ಲಿ ಇದ್ದೇವೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ.
ಈಗ ಇವೆಲ್ಲವೂ ಆಗುವುದರೊಳಗೆ ನಾವು ಮಂಗಳ ಮತ್ತು ನಮ್ಮ ಚಂದ್ರನ ನೆಲದ ಮೇಲೆ ಮಾನವ ವಸಾಹತು ಮಾಡಬಹುದಲ್ಲಾ ಎಂದು ಯೋಚಿಸಬಹುದು. ಆದರೆ ಈಗ ಇರುವ ತಂತ್ರಜ್ಞಾನದಲ್ಲಿ ಮಂಗಳ ಮತ್ತು ಚಂದ್ರ ನನ್ನು ನಮಗೆ ಬೇಕಾಗುವ ಹಾಗೆ ಸಿದ್ಧಮಾಡಿಕೊಳ್ಳಲು ಸಾಧ್ಯವಿಲ್ಲ, ಅಲ್ಲಿ ಭೂಗ್ರಹದ ವಾತಾವರಣ ಇರುವುದಿಲ್ಲ, ಇದಕ್ಕೆ ಸಾಕಷ್ಟು ತಯಾರಿ ಆಗಬೇಕಿದೆ, ತಂತ್ರಜ್ಞಾನ ಇನ್ನು ಸಾಕಷ್ಟು ಸುಧಾರಿಸಬೇಕಿದೆ ಹಾಗಿದ್ದರೂ ಒಂದು ಅಧ್ಯಯನದ ಪ್ರಕಾರ ಮಂಗಳ ಮತ್ತು ಚಂದ್ರನಲ್ಲಿ ಮಾನವ ವಾಸಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಇದಕ್ಕೆ ಬಹು ಮುಖ್ಯ ಕಾರಣ ನಮಗಿರವ ಅಂತರ ಮತ್ತು ಅಲ್ಲಿಯ ಭೌಗೋಳಿಕ ಲಕ್ಷಣಗಳು. ಒಂದು ವೇಳೆ ಮನುಷ್ಯನಿಗೆ ಸಾವಿರ ವರುಷಗಳ ನಿರಂತರ ಪ್ರಯತ್ನದಿಂದ ಆ ತಂತ್ರಜ್ಞಾನ ಬಹಳ ತಡವಾಗಿ ಸಿಕ್ಕಿಬಿಟ್ಟಿತು ಎಂದುಕೊಳ್ಳೋಣ ಆಗ ಅದನ್ನು ಸಾಧಿಸಲು ನಮ್ಮ ಬಳಿ ಏನೂ ಇರುವುದಿಲ್ಲ.
ಕೊನೆಗೆ ನಿಧಾನವಾಗಿ ಮಾನವರಲ್ಲಿ ಅರಾಜಕತೆ ಉಂಟಾಗಿ ಒಬ್ಬಿಗೊಬ್ಬರು ಕಡ್ಡಿ ಕೋಲು ಕಲ್ಲುಗಳಲ್ಲಿ ಹೊಡೆದಾಡಿಕೊಂಡು ನಿರ್ನಾಮವಾಗಬಹುದು. ಕಡೆಯದಾಗಿ ಎಲ್ಲವೂ ನಾಶವಾಗಬಹುದು ಆದರೂ ನಮ್ಮ ಭೂಮಿ ಇನ್ನು ಬಿಲಿಯನ್ ವರ್ಷಗಳ ವರೆವಿಗೆ ಒಂಟಿಯಾಗೇ ಸೂರ್ಯನನ್ನು ಸುತ್ತತ್ತಲೇ ಇರುತ್ತದೆ. ಏಕೆಂದರೆ ಭೂಮಿಗೆ ನಮ್ಮ ಅವಶ್ಯಕತೆ ಇರುವುದಿಲ್ಲ, ಆದರೆ ಭೂಮಿಯ ಅವಶ್ಯಕತೆ ಇದ್ದ ಮನುಷ್ಯರಾದ ನಾವು ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಜೀವ ಸಂಕುಲ ಉಗಮ ಆಗುವ ಮೊದಲು ಭೂಮಿ ಹೇಗೆ ಒಂಟಿಯಾಗೇ ಬಿಲಿಯಾಂತರ ವರ್ಷಗಳ ವರೆವಿಗೆ ಇತ್ತೋ ಇನ್ನು ಮುಂದೆಯೂ ಹಾಗೆಯೇ ಇರುತ್ತದೆ. ಇವೆಲ್ಲ ಆಗುವ ಹೊತ್ತಿಗೆ ನಾವೇ ಇರುವುದಿಲ್ಲ ಬಿಡಿ, ಈಗೇನಿದ್ದರೂ ನಮ್ಮ ಕಾಲ, ಎಂಜಾಯ್ ಮಾಡುವ ಎಂದು ಯೋಚಿಸಬೇಡಿ ಏಕೆಂದರೆ ನಮ್ಮ ಮುಂದಿನ ಪೀಳಿಗೆ ನಮ್ಮ ಮರಿಮಕ್ಕಳ ಮಕ್ಕಳು ಜೀವಿಸುತ್ತಿರುತ್ತಾರೆ ಅಲ್ಲವೇ?

ಪರಿಕಲ್ಪನೆ: ವೇಣುಗೋಪಾಲ್
“ಭವಿಷ್ಯ ಕನಸು ಅಲ್ಲ, ಜಾಗೃತಿ ಜವಾಬ್ದಾರಿ”
ಸಂಪಾದಕೀಯ ನುಡಿ
ಭವಿಷ್ಯವನ್ನು ಊಹಿಸುವುದು ಎಂದರೆ ಕನಸುಗಳ ನಡುವೆ ಸತ್ಯವನ್ನು ನೋಡುವುದು. ಲೇಖಕ ವೇಣುಗೋಪಾಲ್ ಅವರ ಆಳವಾದ ಚಿಂತನೆ ನಮಗೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ: ನಾವೀಗ ಬಳಸುತ್ತಿರುವ ತೈಲ, ಲೋಹ, ಶಿಲಾಮೂಲಗಳು, ಯುದ್ಧ ಮತ್ತು ಪ್ರಕೃತಿ ವಿಪತ್ತುಗಳಿಂದ ಸಂಭವಿಸುವ ನಾಶ, ನಮ್ಮ ಮುಂದಿನ ಪೀಳಿಗೆಗೆ ಹಿನ್ನಡೆ ಆಗಬಹುದು.
ನಮ್ಮ ಕಲ್ಪನೆಯ ಚಂದ್ರ, ಮಂಗಳ ವಾಸಸ್ಥಾನಗಳು ತಂತ್ರಜ್ಞಾನದಿಂದ ಸಾಧ್ಯವೆಂದು ನಂಬಬಹುದು. ಆದರೆ ನಿಜವೆಂದರೆ, ಸಂಪನ್ಮೂಲಗಳ ನಿರ್ವಹಣೆ, ಪರಿಸರ ಸಂರಕ್ಷಣೆ ಮತ್ತು ಸಮಾಜದ ಸಮತೋಲನವಿಲ್ಲದೆ ಈ ಕನಸು “ಸ್ವರ್ಗ” ಆಗುವುದಿಲ್ಲ; ಅದು ನಿರಾಶೆಯ ಸಂಕೇತವಲ್ಲದೆ ಬೇರೆ ಏನೂ ಆಗದು.
ನಾವು ನಿಷ್ಕೃಶಿತವಾಗಿ ತೈಲ, ಲೋಹ, ಶಿಲಾಮೂಲಗಳನ್ನು ಬಳಸುತ್ತಿರುವ ಪ್ರತಿ ಕ್ಷಣ, ನಾವು ಭೂಮಿಗೆ, ಬದುಕಿಗೆ ಜವಾಬ್ದಾರಿಯ ಹೊಣೆ ಹೊರುತ್ತಿದ್ದೇವೆ. ಪ್ರತಿಯೊಂದು ಸಂಪನ್ಮೂಲ ಉಳಿಸುವ ಕೃತ್ಯ, ಪ್ರತಿಯೊಂದು ಪರಿಸರ ಸಂರಕ್ಷಣೆಯ ಕ್ರಮ, ನಮ್ಮ ಮಕ್ಕಳ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಬೆಳಗಿಸುತ್ತದೆ.
ಭವಿಷ್ಯ ಕನಸು ಮಾತ್ರವಲ್ಲ; ಅದನ್ನು ಅರಿತು, ಜಾಗೃತಿಯಿಂದ, ಜವಾಬ್ದಾರಿಯಿಂದ ನಿರ್ವಹಿಸುವುದು ನಮ್ಮ ಕರ್ತವ್ಯ. ಪ್ರಗತಿ ಮತ್ತು ಸಂರಕ್ಷಣೆಯ ಸಮತೋಲನ ಕಾಪಾಡಿ, ಭೂಮಿಗೆ, ಬದುಕಿಗೆ, ಜೀವನಕ್ಕೆ ನಿಜವಾದ ಗೌರವ ನೀಡಿ, ಮುಂದಿನ ಪೀಳಿಗೆಗೆ ನಿಜವಾದ “ಸ್ವರ್ಗ”ದ ಅಸ್ತಿತ್ವವನ್ನು ಬಿಟ್ಟು ಹೋಗೋಣ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



