ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ರಾಜ್ಯದ ಹಿಂದುಳಿವ ವರ್ಗಗಳ ಮೀಸಲಾತಿಗೆ ಶ್ರಮಿಸಿದ ಎಲ್.ಜಿ.ಹಾವನೂರು ರವರನ್ನು ಆ ವರ್ಗಗಳು ನೆನೆಯದಿರುವುದು ಬೇಸರದ ಸಂಗತಿ ಎಂದು ಲೇಖಕ ಹೊ.ಮ.ನಾಗರಾಜು ತಿಳಿಸಿದರು.
ನಾಡಿನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜು ಅರಸರು ಪ್ರಥಮ ಆಯೋಗವನ್ನು ರಚಿಸಿ ಅದಕ್ಕೆ ಹಾವನೂರರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು.
ಅದರನ್ವಯ ಹಾವನೂರರು ಸುಮಾರು 400 ಗ್ರಾಮಗಳು ಮೂರು ಲಕ್ಷದ ಐವತ್ತು ಸಾವಿರ ಜನರನ್ನು ಖುದ್ದು ಬೇಟಿ ಮಾಡಿ ಅವರ ಸ್ಥಿತಿಗತಿಗಳನ್ನು ತಿಳಿದು, ಇವರ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ ಜೀವನ ಶೋಚನೀಯವಾಗಿದೆ. ಇವರ ಪ್ರಗತಿ ಕ್ರಮ ಕೈಗೊಳ್ಳವುದು ಅನಿವಾರ್ಯ ಎಂಬ ಅಂಶಗಳುಳ್ಳ ಹಾವನೂರು ವರದಿಯನ್ನು 1975 ರಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಾರೆ.
ಆ ನಂತರ ಈ ವರದಿಯ ಆಧಾರದ ಮೇಲೆ ಹಲವು ಸೌಲಭ್ಯಗಳು ಸಂಬಂದಿಸಿದ ವರ್ಗಗಳಿಗೆ ದೊರೆಯುತ್ತವೆ. ಆದರೆ ಈ ವರ್ಗಗಳು ದೇವರಾಜು ಅರಸರನ್ನಾಗಲಿ ಅಥವಾ ಹಾವನೂರರನ್ನಾಗಲಿ ಸ್ಮರಿಸುವ ಸೌಜನ್ಯವನ್ನು ತೋರಿಸುತ್ತಿಲ್ಲ. ಸರ್ಕಾರಗಳು ಸಹಾ ಹಾವನೂರ ವ್ಯಕ್ತಿತ್ವ ಮತ್ತು ಘನತೆಗೆ ತಕ್ಕಂತಹ ಗೌರವ ದೊರಕಿಸಿಕೊಟ್ಟಿಲ್ಲ. ಈ ಬಗ್ಗೆ ಸರ್ಕಾರಗಳು ಮತ್ತು ಹಿಂದುಳಿದ ವರ್ಗಗಳು ಆಲೋಚಿಸಬೇಕಾಗಿದೆ ಎಂದರು.
ಟಿ.ಎನ್.ಜಗನ್ನಾಥ್ ಮಾತನಾಡಿ, ಹಾವನೂರರು ಮಹಾ ಚೇತನ. ಹೈಕೋರ್ಟ್ ನ್ಯಾಯಾಧೀಶ ಹುದ್ದೆಯನ್ನು ತಿರಸ್ಕರಿಸಿ ಶ್ರಮ ಸಮಾಜದ ಏಳಿಗೆಗೆ ತೊಡಗಿಸಿಕೊಂಡವರು. ಆಫ್ರಿಕಾ ದೇಶದ ಸಂವಿಧಾನ ರಚನೆಯಲ್ಲಿ ಸಲಹೆಗಾರರಾಗಿ ನಿಂತವರು. ವಾಲ್ಮೀಕಿ ಸಮುದಾಯದಲ್ಲಿ ಪ್ರಪ್ರಥಮ ವಕೀಲ ವೃತ್ತಿಯ ಪ್ರದವಿ ಗಳಿಸಿದವರು. ತನ್ನ ಸಮುದಾಯದ ಜೊತೆಗೆ ಹಿಂದುಳಿದ ವರ್ಗಗಳ ಏಳಿಗೆಗೆ ಹೆಚ್ಚು ತೊಡಗಿಸಿಕೊಂಡವರು. ಅವರ ನೂರನೇ ವರ್ಷದ ಜನ್ಮದಿನಾಚರಣೆಯು ವಿಜೃಂಭಣೆಯಿಂದ ಸರ್ಕಾರ ನಡೆಸಬೇಕಾಗಿತ್ತು. ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರನ್ನು ನೆನೆಸುತ್ತಿರುವುದು ನಮ್ಮ ಪುಣ್ಯ ಎಂದರು.
ಕಾರ್ಯಕ್ರಮದಲ್ಲಿ ರಾಜ ವಂಶಸ್ಥರಾದ ರಾಜಕುಮಾರ, ಹೆಚ್.ಕೆ.ಶ್ರೀನಿವಾಸ, ಪಿ.ಕೃಷ್ಣಪ್ಪ, ಎ.ಓ.ನಾಗರಾಜು, ಟಿ.ಎನ್.ಕೃಷ್ಣಮೂರ್ತಿ, ಅಶ್ವಥನಾರಾಯಣ, ಓ.ತಿಪ್ಪೇಸ್ವಾಮಿ, ರಾಮಾಂಜಿನಪ್ಪ, ರಾಮಕೃಷ್ಣ.ಆರ್, ಓಬಯ್ಯ, ರಾಮಕೃಷ್ಣಪ್ಪ, ಶಂಕರ, ಬಿ.ಹೊಸಹಳ್ಳಿ ನಾಗರಾಜು, ತಿರುಮಲೇಶ, ನರಸಿಂಹ, ತಿಪ್ಪೇಸ್ವಾಮಿ. ರಾಮಾಂಜಿನೇಯ, ಇತರರು ಇದ್ದರು.
ವರದಿ :- ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4