ಆಂಧ್ರಪ್ರದೇಶ: ಮಾವಿನ ಹಣ್ಣುಗಳ ಲೋಡ್ ಸಾಗಿಸುತ್ತಿದ್ದ ಲಾರಿ ಮುಗುಚಿ ಬಿದ್ದ ಪರಿಣಾಮ 9 ಕಾರ್ಮಿಕರು ಸಾವನ್ನಪ್ಪಿ, 10 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ.
ಚಿಟ್ಟೆಮ್ಮ (25), ಸುಬ್ಬರತ್ನಮ್ಮ (45), ಗಜ್ಜಲ ದುರ್ಗಯ್ಯ (32), ಗಜ್ಜಲ ಶ್ರೀನು (33), ಗಜ್ಜಲ ಲಕ್ಷ್ಮಿ ದೇವಿ (36), ರಾಧಾ (39), ಗಜ್ಜಲ ರಮಣ (42), ವೆಂಕಟ ಸುಬ್ಬಮ್ಮ (37) ಸ್ಥಳದಲ್ಲೇ ಮೃತಪಟ್ಟರು. ವಡ್ಡಿವೇಡು ಗ್ರಾಮದ ಮುನಿಚಂದ್ರ (38) ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ 10 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ರಾಜಂಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನ್ನಮಯ್ಯ ಜಿಲ್ಲೆಯ ರೈಲ್ವೆಕೊಡೂರು ತಾಲೂಕಿನ ಸೆಟ್ಟಿಗುಂಟ ಎಸ್ ಟಿ ಕಾಲೋನಿಯಲ್ಲಿ ದಿನಗೂಲಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುವ ಬುಡಕಟ್ಟು ಜನರು ಮಾವಿನ ಹಣ್ಣುಗಳನ್ನು ಕೀಳಲು ರಾಜಂಪೇಟೆ ಬಳಿಯ ಇಸುಕುಪಲ್ಲಿಗೆ ತೆರಳಿದ್ದರು. ಅವರು ಕೊಯ್ದ ಮಾವಿನ ಹಣ್ಣುಗಳನ್ನು ಲಾರಿಯಲ್ಲಿ ತುಂಬಿಸಿ ರೈಲ್ವೆಕೊಡೂರು ಮಾರುಕಟ್ಟೆ ಅಂಗಳಕ್ಕೆ ಸಾಗಿಸುತ್ತಿದ್ದರು. ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 21 ಕಾರ್ಮಿಕರು ಕುಳಿತು 30 ರಿಂದ 40 ಟನ್ ಮಾವಿನ ಹಣ್ಣು ಲೋಡ್ನೊಂದಿಗೆ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಲಾರಿ ನಿಯಂತ್ರಣ ತಪ್ಪಿ ರೆಡ್ಡಿಪಲ್ಲಿ ಚೆರುವು ಸಮೀಪಿಸುತ್ತಿದ್ದಂತೆ ಪಲ್ಟಿಯಾಗಿದೆ. ಲಾರಿ ಪಲ್ಟಿಯಾಗಿ 30 ರಿಂದ 40 ಟನ್ ತೂಕದ ಮಾವಿನ ಹಣ್ಣುಗಳು ಅವರ ಮೇಲೆ ಬಿದ್ದಿದೆ. ಅಪಘಾತವನ್ನು ಕಂಡ ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯ ಕೈಗೊಂಡು ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC