ಚಿಕ್ಕಮಗಳೂರು ಲವ್ ಜಿಹಾದ್ ವಿಚಾರವಾಗಿ ಡ್ಯಾನ್ಸ್ ಮಾಸ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 7 ಜನ ಭಜರಂಗದಳ ಕಾರ್ಯಕರ್ತರನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಯುವಕನಿಂದ ಲವ್ ಜಿಹಾದ್ ನಡೆಸಲಾಗುತ್ತಿದೆ ಎಂದು ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು, ಯುವಕನನ್ನು ಕೂಡಿಹಾಕಿ ಮನಬಂದಂತೆ ಥಳಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ.
ಅಪ್ರಾಪ್ತ ಹಿಂದೂ ಬಾಲಕಿಯ ಜತೆ ಆಲ್ದೂರು ಪಟ್ಟಣದ ಸಂತೆ ಮೈದಾನದ ನಿವಾಸಿ ರೂಮನ್ ಎಂಬಾತ ಸಲಿಗೆಯಿಂದ ಇದ್ದು, ರೂಮನ್ ಡಾನ್ಸ್ ಮಾಸ್ಟರ್ ಆಗಿದ್ದು, ಪ್ರೀತಿಯ ಹೆಸರಿನಲ್ಲಿ ಈತ ಲವ್ ಜಿಹಾದ್ ನಡೆಸುತ್ತಿದ್ದಾನೆ ಎಂಬುದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.
ಆಲ್ದೂರು ಸಮೀಪದ ಗಾಳಿಗಂಡಿಯ ಯುವಕ ರೂಮನ್, ತನ್ನನ್ನು ಭಜರಂಗ ದಳದ ಕಾರ್ಯಕರ್ತರು ಆಲ್ದೂರಿಗೆ ಕರೆಸಿ ಬಳಿಕ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದ.
ಚಿಕ್ಕಮಗಳೂರು ತಾಲೂಕಿನ ದೊಡ್ಡ ಮಾಗರವಳ್ಳಿ ಗ್ರಾಮದ ಹಿಂದೂ ಬಾಲಕಿಯನ್ನು ಪ್ರೀತಿಯ ಹೆಸರಲ್ಲಿ ಪುಸಲಾಯಿಸಿದ್ದಾನೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಇದೀಗ ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಸಹ ಬಾಲಕಿಯ ಪೋಷಕರು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.


