ಬೆಂಗಳೂರು: ಮನರಂಜನೆಯ ಹೊಸ ಪರ್ವ ಆರಂಭಿಸಲು ‘JioCinema’ ಓಟಿಟಿ ವೇದಿಕೆ ಸಿದ್ಧವಾಗಿದೆ. ತನ್ನ ವೀಕ್ಷಕರಿಗೆ ವೈವಿಧ್ಯಮಯ ರಂಜನೆಯ ರಸದೂಟ ಉಣಬಡಿಸುವ ಉದ್ದೇಶದ ಭಾಗವಾಗಿ ‘ಲವ್ ಯು ಅಭಿ’ ಎಂಬ ಕನ್ನಡ ವೆಬ್ ಸಿರೀಸ್ ಮೇ 19ರಂದು ‘JioCinema’ದಲ್ಲಿ ನೇರವಾಗಿ ಬಿಡುಗಡೆಗೊಳ್ಳುತ್ತಿದೆ. ಇದನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ!
ಕಾಳಿ ವೇಲಾಯುಧಂ ನಿರ್ಮಾಣ ಮಾಡಿ ನಿರ್ದೇಶಿಸಿರುವ ‘JIOCINEMA’ ಒರಿಜಿನಲ್ ವೆಬ್ ಸಿರೀಸ್‌ನಲ್ಲಿ ಅದಿತಿ ಪ್ರಭುದೇವ, ವಿಕ್ರಮ್ ರವಿಚಂದ್ರನ್ ಮತ್ತು ರವಿಶಂಕರ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ಹಿರಿಯ ನಟ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅವರಿಗೂ ಇದು ಮೊದಲ ವೆಬ್ ಸಿರೀಸ್. ತಮ್ಮ ಪಾತ್ರದ ಕುರಿತು ತುಂಬ ಉತ್ಸಾಹದಿಂದ ವಿವರಿಸುತ್ತಾರೆ ವಿಕ್ರಮ್. ‘ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ. ಯಾಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ. ‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೇ’ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ, ಅವನ ಪ್ರೇಮದಲ್ಲಿಯೂ, ಬದುಕಿನಲ್ಲಿ ಹೋರಾಟದಲ್ಲಿಯೂ ನ್ಯಾಯೋಚಿತವಾಗಿದ್ದು ನಡೆಯುವುದೇ ಇಲ್ಲ’. ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ ಶಿವನ ಪಾತ್ರಕ್ಕೆ ಜೀವ ತುಂಬಿದ ವಿಕ್ರಮ್ ರವಿಚಂದ್ರನ್.
ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅದಿತಿ ಪ್ರಭುದೇವ ‘ಲವ್ ಯು ಅಭಿ’ಯ ಮೂಲಕ ವೆಬ್ ಸಿರೀಸ್ ಜಗತ್ತಿಗೂ ಜಿಗಿದಿದ್ದಾರೆ. ಇವರಿಬ್ಬರ ಕ್ಯೂಟ್ ಕಾಂಬಿನೇಷನ್ ಜೊತೆ ಖ್ಯಾತ ನಟ ರವಿಶಂಕರ್ ಅವರ ಅಬ್ಬರದ ಭರ್ಜರಿ ಮಸಾಲೆಯೂ ಇದೆ. ಪೊಲೀಸ್ ಅಧಿಕಾರಿಯಾಗಿ ರವಿಶಂಕರ್ ಅಬ್ಬರಿಸಿದ್ದಾರೆ.
ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ಬೆಳೆಯುತ್ತ ಹೋಗುವ ಈ ಕಥನದಲ್ಲಿ ಮನಸ್ಸನ್ನು ಭಾವುಕಗೊಳಿಸುವ ಸನ್ನಿವೇಶಗಳಿವೆ, ದಾಂಪತ್ಯದ ಮಧುರ ಕ್ಷಣಗಳನ್ನು ಉಣಬಡಿಸುವ ದೃಶ್ಯಗಳಿವೆ, ಪ್ರೇಮದ ವ್ಯಾಮೋಹ ಮತ್ತು ಸತ್ಯದ ಹಂಬಲದ ನಡುವಿನ ಘರ್ಷಣೆಯೂ ಇದೆ. ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ರಸಪಾಕ ‘ಲವ್ ಯು ಅಭಿ’. ಮೂವತ್ತು ನಿಮಿಷಗಳ ಏಳು ಎಪಿಸೋಡ್‌ಗಳಲ್ಲಿ ಅಭಿಯ ಬದುಕಿನ ಕಥೆಯನ್ನು ಹೇಳಲಾಗಿದೆ.
ಯುವನಟರ ಧಮಾಲ್; ಅನುಭವಿಗಳ ಕಮಾಲ್:
ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್‍ರಾಜ್ ಹೀಗೆ ಅನುಭವಿ ಕಲಾವಿದರ ದಂಡೂ ಇದೆ.
‘ಲವ್ ಯು ಅಭಿ’ಗೆ ಅರುಣ್ ಬ್ರಹ್ಮ ಅವರ ಕ್ಯಾಮೆರಾ ಚಳಕವಿದ್ದು, ಪ್ರದಿಪ್ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್ ದಿನಕರ್ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್ ಗೌಡ ಮತ್ತು ಜಿ.ವಿ. ಸತೀಶ್ ಕುಮಾರ್ ಜಂಟಿಯಾಗಿ ಮಾತುಗಳನ್ನು ಪೋಣಿಸಿದ್ದಾರೆ.
ಟ್ರೈಲರ್ ಲಿಂಕ್: