ಬೆಂಗಳೂರು: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ (LPG) ಸಿಲಿಂಡರ್ಗಳ ತೀವ್ರ ಕೊರತೆ ಮತ್ತು ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಲಿಂಡರ್ ಕೊರತೆಯಿಂದಾಗಿ ರಾಜ್ಯದ ಜನತೆ ಮತ್ತು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಆದರೆ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮಾತ್ರ ಈ ಬಗ್ಗೆ ಸಂಸತ್ತಿನಲ್ಲಿ ತುಟಿ ಬಿಚ್ಚದೆ ಮೌನ ವಹಿಸಿರುವುದು ದುರದೃಷ್ಟಕರ ಎಂದು ಕಿಡಿಕಾರಿದರು.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಬೆಂಗಳೂರಿನ ಹೋಟೆಲ್ಗಳನ್ನು ಬಂದ್ ಮಾಡುವ ಪರಿಸ್ಥಿತಿ ಬಂದಿದೆ. ಹೋಟೆಲ್ ಮಾಲೀಕರು ಈಗಾಗಲೇ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈ ಕೊರತೆಯು ಸಾರ್ವಜನಿಕರ ಮೇಲೂ ಪರಿಣಾಮ ಬೀರುತ್ತಿದೆ ಎಂದು ಶಿವಕುಮಾರ್ ಹೇಳಿದರು.
“ಬಿಜೆಪಿ ಸಂಸದರು ಬೇರೆಲ್ಲಾ ವಿಷಯಗಳ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ, ಆದರೆ ಸಾಮಾನ್ಯ ಜನರಿಗೆ ತೊಂದರೆಯಾದಾಗ ಯಾಕೆ ಮೌನವಾಗಿದ್ದಾರೆ? ಅವರು ಕೂಡಲೇ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಚರ್ಚೆಗೆ ಒತ್ತಾಯಿಸಬೇಕು,” ಎಂದು ಅವರು ಆಗ್ರಹಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನದಂದೇ ಕೇಂದ್ರ ಸರ್ಕಾರ ಸಿಲಿಂಡರ್ ದರವನ್ನು 60 ರೂಪಾಯಿ ಏರಿಕೆ ಮಾಡಿದೆ. ಇದು ಕೋಟ್ಯಂತರ ಮಹಿಳೆಯರ ಬಜೆಟ್ ಮೇಲೆ ನೇರ ಪರಿಣಾಮ ಬೀರಿದೆ. ತೈಲ ಬೆಲೆ ಏರಿಕೆಯ ಜೊತೆಗೆ ಅಡುಗೆ ಅನಿಲದ ಕೊರತೆಯೂ ಸೇರಿ ಜನರನ್ನು ಹೈರಾಣಾಗಿಸಿದೆ ಎಂದು ಡಿಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮೇಕೆದಾಟು ಮತ್ತು ಎತ್ತಿನಹೊಳೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮೊದಲು ಕೇಂದ್ರದ ಮೇಲೆ ಒತ್ತಡ ಹೇರಿ ಇಂಧನ ಕೊರತೆಯನ್ನು ನೀಗಿಸಲು ತಮ್ಮ ಪಕ್ಷದ ಸಂಸದರಿಗೆ ಸೂಚಿಸಲಿ ಎಂದು ಶಿವಕುಮಾರ್ ಸಲಹೆ ನೀಡಿದರು.
ದೇಶಾದ್ಯಂತ ಉಂಟಾಗಿರುವ ಈ ಎಲ್ ಪಿಜಿ ಬಿಕ್ಕಟ್ಟು ಹೋಟೆಲ್ ಉದ್ದಿಮೆ ಮತ್ತು ಸಾಮಾನ್ಯ ಜನರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದ್ದು, ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪೂರೈಕೆಯನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


