ಮಂಡ್ಯ : ಸಕ್ಕರೆಯ ನಾಡು ಮಂಡ್ಯ ನಗರ ಪ್ರವೇಶಿಸುತ್ತಿದ್ದಂತೆಯೇ ಹಸಿರಿನಿಂದ ಕಂಗೊಳಿಸುವ ಸುಂದರವಾದ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಉದ್ಯಾನವನವನ್ನು ದೇವವನವನ್ನಾಗಿಸಿದವರು ಕ್ರಿಯಾಶೀಲ ಪತ್ರಕರ್ತ ಎಂ.ಶಿವಕುಮಾರ್.
ಪಾಳುಬಿದ್ದಿದ್ದ ಒಂದೂವರೆ ಎಕರೆಯಷ್ಟು ಭೂಮಿಯನ್ನು ಮಂಡ್ಯ ನಗರಸಭೆಯಿಂದ ದತ್ತು ಪಡೆದು ಕಳೆದ ಇಪ್ಪತ್ತು ವರ್ಷಗಳಿಂದ ಸಸ್ಯ ಸೇವೆಯನ್ನೇ ಶಿವಪೂಜೆಯಂತೆ ಮಾಡಿ, ವಿವಿಧ ಬಗೆಯ ನೂರಾರು ಔಷಧೀಯ ಸಸಿಗಳು, ಕಾಡುಜಾತಿಯ ಮರಗಳು, ಅಲಂಕಾರಿಕ ಸಸಿಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಸದ್ದುಗದ್ದಲವಿಲ್ಲದೆ ಸಸ್ಯಕಾಶಿಯನ್ನೇ ಸೃಷ್ಟಿಸಿದ ಕಾಯಕ ಯೋಗಿ ಪರಿಸರವಾದಿ ಪತ್ರಕರ್ತ ಎಂ.ಶಿವಕುಮಾರ್.


ಪ್ರಧಾನಿ ಮೋದಿಯವರ ಜೂನ್.21ರ ವಿಶ್ವಯೋಗ ದಿನಾಚರಣೆಯಿಂದ ಪ್ರಭಾವಿತರಾಗಿ ಪ್ರತಿನಿತ್ಯ ವಾಯು ವಿಹಾರಕ್ಕೆ ಬರುವ ನೂರಾರು ಮಂದಿ ವಯೋವೃದ್ದರು, ಸಾರ್ವಜನಿಕರ ಅನುಕೂಲಕ್ಕಾಗಿ ಸಿದ್ದಗಂಗಾ ಶ್ರೀಗಳ ಉದ್ಯಾನವನದಲ್ಲಿ ಧ್ಯಾನಕೇಂದ್ರ ನಿರ್ಮಾಣ ಮಾಡಿದ್ದಾರೆ.
ಶಾಲಾ ಮಕ್ಕಳಿಗೆ ಕರಾಟೆ, ಧ್ಯಾನ ಹಾಗೂ ಯೋಗಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟು ಆರೋಗ್ಯಕರ ಸಮಾಜಕ್ಕೆ ಸಹಕಾರಿಯಾಗಿದ್ದಾರೆ.
ತಮ್ಮ ಜನ್ಮ ದಿನಾಚರಣೆಯನ್ನು ಸ್ಮಶಾನ, ಸರ್ಕಾರಿ ಶಾಲೆಯ ಆವರಣ ಹಾಗೂ ಸ್ಲಂಗಳಲ್ಲಿ ಸಸಿನೆಡುವ ಮೂಲಕ ಆಚರಿಸಿಕೊಂಡು ರೈತರಿಗೆ ತೆಂಗಿನ ಸಸಿಗಳನ್ನು ಉಚಿತವಾಗಿ ನೀಡುವ ಮೂಲಕ ಸಸ್ಯಪ್ರೇಮವನ್ನು ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ.

* ಕೇಕ್ ಬಿಡಿ — ಸಸಿನೆಡಿ
* ಸಸಿನೆಡು — ಮರಮಾಡು
* ಮನೆಗೊಂದು ಸಸಿ — ಊರಿಗೊಂದು ವನ
* ಹಸಿರೇ ಉಸಿರು
* ಪ್ರಕೃತಿ ಸಂರಕ್ಷಣೆ ಸರ್ವರ ಹೊಣೆ

ಈ ಎಲ್ಲಾ ಪರಿಸರ ಪರವಾದ ಘೋಷ ವಾಕ್ಯವನ್ನು ತಮ್ಮ ದಿನನಿತ್ಯದ ಪತ್ರಿಕೋದ್ಯಮದ ಅಕ್ಷರ ಕ್ರಾಂತಿಯ ಜೊತೆ–ಜೊತೆಯಲ್ಲೇ ಹಸಿರಿನ ಕ್ರಾಂತಿಯನ್ನು ಎಲೆಮರೆ ಕಾಯಿಯಂತೆ ಯಾವುದೇ ಪ್ರಚಾರದ ಹಂಗಿಲ್ಲದೆ ಮಾಡುತ್ತಾ ಬಂದಿರುವ ಮಂಡ್ಯದ ಕಾಯಕಯೋಗಿ ನಮ್ಮೆಲ್ಲರ ಹೆಮ್ಮೆಯ ಪತ್ರಕರ್ತ ಎಂ. ಶಿವಕುಮಾರ್.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


